ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿ

Update: 2018-02-06 14:35 GMT

ಹೊಸದಿಲ್ಲಿ,ಫೆ.6: ಕೇಂದ್ರ ಸರಕಾರದ ನೌಕರರಿಗೆ ಒಳ್ಳೆಯ ಸುದ್ದಿಯೊಂದು ಇಲ್ಲಿದೆ. ನರೇಂದ್ರ ಮೋದಿ ಸರಕಾರವು ಮ್ಯಾಟ್ರಿಕ್ಸ್ ಲೆವೆಲ್ 1ರಿಂದ 5ರವರೆಗಿನ ಕೆಳಮಟ್ಟದ ಅಧಿಕಾರಿಗಳ ವೇತನವನ್ನು ಏಳನೇ ವೇತನ ಆಯೋಗದ ಶಿಫಾರಸಿನಾಚೆಗೆ ಹೆಚ್ಚಿಸುವ ಬಗ್ಗೆ ಪರಿಶೀಲಿಸುತ್ತಿದೆ. ಸದ್ಯ ಕೇಂದ್ರ ಸರಕಾರಿ ನೌಕರರು ಮೂಲವೇತನದ 2.57 ಫಿಟ್‌ಮೆಂಟ್ ಸೂತ್ರಕ್ಕನುಗುಣವಾಗಿ ವೇತನಗಳನ್ನು ಪಡೆಯತ್ತಿದ್ದು, ಸರಕಾರದ ಚಿಂತನೆ ಕಾರ್ಯರೂಪಕ್ಕೆ ಇಳಿದರೆ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. ವೇತನ ಏರಿಕೆಯ ಬಗ್ಗೆ ಅಧಿಕೃತ ಪ್ರಕಟಣೆಯು ಎಪ್ರಿಲ್‌ನ ಆಸುಪಾಸಿನಲ್ಲಿ ಹೊರಬೀಳುವ ವರದಿಯಿದೆ.

ನೌಕರರಿಗೆ ಹೆಚ್ಚಿನ ವೇತನ ದೊರೆಯುವಂತೆ ಸರಕಾರವು ಫಿಟ್‌ಮೆಂಟ್ ಫ್ಯಾಕ್ಟರ್‌ನ್ನು ಮೂರು ಪಟ್ಟು ಪರಿಷ್ಕರಿಸಬಹುದು, ಆದರೆ ವೇತನ ಏರಿಕೆಯು ಮುಂದಿನ ಹಣಕಾಸು ವರ್ಷಕ್ಕೆ ಮುನ್ನ ಜಾರಿಗೊಳ್ಳುವುದಿಲ್ಲ. ಸರಕಾರವು ವೇತನ ಏರಿಕೆಯ ಪ್ರಸ್ತಾಪವನ್ನು ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಸಂಪುಟದ ಮುಂದಿರಿಸಲು ಯೋಜಿಸಿದೆ ಎನ್ನಲಾಗಿದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಬಳಿಕ ಕೇಂದ್ರ ಸರಕಾರಿ ನೌಕರರ ಮೂಲ ವೇತನ 2.57 ಫಿಟ್‌ಮೆಂಟ್ ಫ್ಯಾಕ್ಟರ್‌ನ ಆಧಾರದಲ್ಲಿ ಮಾಸಿಕ 7,000 ರೂ.ಗಳಿಂದ 18,000 ರೂ.ಗಳಿಗೆ ಏರಿಕೆಯಾಗಿದ್ದು, 2016,ಜ.1ರಿಂದ ಪೂರ್ವಾನ್ವಯಗೊಂಡು ಜಾರಿಗೆ ಬಂದಿತ್ತು.

ಆರಂಭದಲ್ಲಿ ವೇತನ ಆಯೋಗವು 18,000 ರೂ.ಗಳ ಮೂಲವೇತನಕ್ಕೆ ಶಿಫಾರಸು ಮಾಡಿತ್ತು. ಆದರೆ ಸರಕಾರಿ ನೌಕರರು ಪ್ರತಿಭಟನೆಗಳನ್ನು ನಡೆಸಿ ಅದನ್ನು 26000 ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದರು. ಈಗ ಈ ವರದಿಗಳನ್ನು ನಂಬುವುದಾದರೆ, ಪ್ರಸ್ತಾವನೆಯು ಸಮ್ಮತಿಗಾಗಿ ಎಪ್ರಿಲ್ ಆರಂಭದಲ್ಲಿ ಸಂಪುಟಕ್ಕೆ ಸಲ್ಲಿಕೆಯಾದ ಬಳಿಕ ಪೇ ಮ್ಯಾಟ್ರಿಕ್ಸ್ ಲೆವೆಲ್ 1ರಿಂದ 5ರೊಳಗಿರುವ ನೌಕರರು ವೇತನದಲ್ಲಿ ಹೆಚ್ಚಳವನ್ನು ಕಾಣಲಿದ್ದಾರೆ. ಕೇಂದ್ರ ಸರಕಾರಿ ನೌಕರರ ವೇತನಗಳನ್ನು 7ನೇ ವೇತನ ಆಯೋಗದ ಶಿಫಾರಸುಗಳನ್ನು ಮೀರಿ ಹೆಚ್ಚಿಸುವುದಾಗಿ ವಿತ್ತಸಚಿವ ಅರುಣ ಜೇಟ್ಲಿಯವರು 2016ರಲ್ಲಿ ಭರವಸೆ ನೀಡಿದ್ದರು.

ತನ್ಮಧ್ಯೆ ಸರಕಾರವು ತನ್ನ ನೌಕರರ ವೇತನ ಏರಿಕೆ ಬಾಕಿಗಳನ್ನು ಪಾವತಿಸುವುದಿಲ್ಲ ಎಂಬ ವರದಿಗಳಿವೆ. ಈ ಪ್ರಸ್ತಾವನೆಯನ್ನು ಎಪ್ರಿಲ್‌ನಲ್ಲಿ ಜೇಟ್ಲಿಯವರ ಮುಂದಿರಿಸ ಲಾಗುವುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News