ವರದಕ್ಷಿಣೆಗಾಗಿ ಪತ್ನಿಯ ಕಿಡ್ನಿಯನ್ನೇ ಮಾರಿದ ಪತಿ, ಮೈದುನ !

Update: 2018-02-06 14:52 GMT

ಬೆರ್ಹಾಮ್‌ಪೊರಾ, ಫೆ. 6: ಎರಡು ಲಕ್ಷ ರೂ. ವರದಕ್ಷಿಣೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ 28 ವರ್ಷದ ಮಹಿಳೆಯ ಕಿಡ್ನಿ ಮಾರಿದ ಆರೋಪದಲ್ಲಿ ಪತಿ ಹಾಗೂ ಮೈದುನನ್ನು ಪೊಲೀಸರು ಬಂಧಿಸಿದ್ದಾರೆ.

 “ವರದಕ್ಷಿಣೆಗಾಗಿ ತನ್ನ ಪತಿ ಹಾಗೂ ಮೈದುನ ಕಿರುಕುಳ ನೀಡುತ್ತಿದ್ದರು. ನನಗಿದ್ದ ಅಪೆಂಡಿಕ್ಸ್‌ಗೆ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಗೆ ಕರೆದೊಯ್ದ ಕಿಡ್ನಿ ತೆಗಿಸಿದ್ದಾರೆ” ಎಂದು ರೀಟಾ ಸರ್ಕಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

“ಎರಡು ವರ್ಷಗಳ ಹಿಂದೆ ತಾನು ಹೊಟ್ಟೆ ನೋವಿನಿಂದ ನರಳುತ್ತಿದ್ದೆ. ನನ್ನ ಪತಿ ನನ್ನನ್ನು ಕೋಲ್ಕತ್ತಾದ ನರ್ಸಿಂಗ್ ಹೋಮ್ ಒಂದಕ್ಕೆ ಕರೆದೊಯ್ದಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ನೀವು ಗುಣಮುಖರಾಗಲಿದ್ದೀರಿ” ಎಂದು ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಭರವಸೆ ನೀಡಿದ್ದರು.

“ಆದರೆ, ನನ್ನ ಹೊಟ್ಟೆ ನೋವು ಹೆಚ್ಚಾಗಿತ್ತು. ಈ ಶಸ್ತ್ರಚಿಕಿತ್ಸೆ ಬಗ್ಗೆ ಯಾರಿಗೂ ತಿಳಿಸದಂತೆ ನನ್ನ ಪತಿ ನನಗೆ ಎಚ್ಚರಿಕೆ ನೀಡಿದ್ದರು. ನನ್ನ ಹೊಟ್ಟೆನೋವಿಗೆ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ನೀಡುವಂತೆ ನಾನು ವಿನಂತಿಸಿದ್ದೆ. ಆದರೆ, ಅವರು ನಿರ್ಲಕ್ಷಿಸಿದ್ದರು” ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಅನಂತರ ಹೆತ್ತವರು ಹಾಗೂ ಸಂಬಂಧಿಕರು ರೀಟಾ ಅವರನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ರೀಟಾ ಅವರ ಕಿಡ್ನಿ ತೆಗೆಯಲಾಗಿದೆ ಎಂದು ತಿಳಿಸಿದರು. ಇದರಿಂದ ಆಘಾತಕ್ಕೊಳಗಾದ ರೀಟಾ ಎರಡನೇ ಅಭಿಪ್ರಾಯಕ್ಕಾಗಿ ಮಾಲ್ದಾದಲ್ಲಿರುವ ನರ್ಸಿಂಗ್ ಹೋಂ ಒಂದರಲ್ಲಿ ತಪಾಸಣೆ ಮಾಡಿಸಿದರು. ಅಲ್ಲಿ ಕೂಡ ವೈದ್ಯರು ಒಂದು ಕಿಡ್ನಿ ತೆಗೆಯಲಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ರೀಟಾ ಅವರು ಪೊಲೀಸ್ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News