×
Ad

ಮಣಿಪಾಲ: ಫೆ. 8ರಿಂದ ಎಸ್‌ಒಸಿಯ ‘ಆರ್ಟಿಕಲ್-19’ ಪ್ರಾರಂಭ

Update: 2018-02-06 20:23 IST

ಉಡುಪಿ, ಫೆ.6: ದೇಶದ ಅಗ್ರಗಣ್ಯ ಐದು ಮಾಧ್ಯಮ ಸಂವಹನ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವಿದ್ಯಾರ್ಥಿ ಸಂಯೋಜಿತ ವಾರ್ಷಿಕ ಮಾಧ್ಯಮ ಮೇಳ ‘ಆರ್ಟಿಕಲ್-19’ ಫೆ.8ರಿಂದ 10ರವರೆಗೆ ಎಸ್‌ಒಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನೂತನ ನಿರ್ದೇಶಕಿ ಡಾ.ಪದ್ಮಾರಾಣಿ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವು ಪ್ರಮುಖರ ಮೂರು ದಿನಗಳ ಈ ಮಾಧ್ಯಮ ಮೇಳದಲ್ಲಿ ಪಾಲ್ಗೊಳ್ಳುವರು ಎಂದರು.

‘ಆರ್ಟಿಕಲ್-19’ನ್ನು ಮಾಧ್ಯಮ ಕ್ಷೇತ್ರದ ಅನುಭವಿ ತರಬೇತುದಾರರಾದ ವಸಂತಿ ಹರಿಪ್ರಕಾಶ್ ಫೆ.8ರ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಎಸ್‌ಒಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯ ಬಳಿಕ ವಸಂತಿ ಹರಿಪ್ರಕಾಶ್ ಅವರು ‘ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಮಿಂಚಲು ನಿಮ್ಮ ಪದವಿ ಸಾಕಾಗುವುದೇ?’ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಬಳಿಕ ಪ್ರಸಿದ್ಧ ಪತ್ರಕರ್ತ ರಾಜೀವ್ ಭಟ್ಟಾಚಾರ್ಯ ಅವರು ‘ಈಶಾನ್ಯ ರಾಜ್ಯಗಳಲ್ಲಿ ಪ್ರಸಕ್ತ ಮಾಧ್ಯಮಗಳ ಕಾರ್ಯನಿರ್ವಹಣೆ’ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಅಲ್ಲದೇ ಸಾಮಾಜಿಕ ವಾಣಿಜ್ಯೋದ್ಯಮಿ ಸೃಜನ್ ಪಾಲ್ ಸಿಂಗ್ ಅವರು ‘ಡಾ.ಅಬ್ದುಲ್ ಕಲಾಂರ ಕನಸಿನ ರಾಷ್ಟ್ರ-ನಾಲ್ಕನೇ ಕೈಗಾರಿಕಾ ಕ್ರಾಂತಿ’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಎಸ್‌ಒಸಿಯ ಹಳೆ ವಿದ್ಯಾರ್ಥಿಯಾಗಿರುವ ‘ಕಾರವಾನ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹಾಗೂ ಪ್ರಶಸ್ತಿ ವಿಜೇತ ಪತ್ರಕರ್ತ ವಿನೋದ್ ಕೆ.ಜೋಸ್ ಅವರು ‘ವರ್ತಮಾನ ಕಾಲದ ಭಾರತದಲ್ಲಿ ರಾಜಕೀಯ ನಿಯತ ಕಾಲಿಕವನ್ನು ನಡೆಸುವ ಕಷ್ಟ’ ಎಂಬ ಕುತೂಹಲಕರ ವಿಷಯದ ಮೇಲೆ ಮಾತನಾಡಲಿದ್ದಾರೆ ಎಂದು ಡಾ.ಪದ್ಮಾರಾಣಿ ತಿಳಿಸಿದರು.

ಫೆ.9ರಂದು ಅಪರಾಹ್ನ 2 ಗಂಟೆಗೆ ‘ಪಿಂಕ್’ ಚಲನಚಿತ್ರದ ನಿರ್ದೇಶಕ ಅನಿರುದ್ಧ್ ಚೌಧುರಿ ಅವರು ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ ಮೂರು ದಿನಗಳ ಕಾಲ ಮಾಧ್ಯಮ, ಚಲನಚಿತ್ರ, ಕರಕುಶಲ ಹಾಗೂ ಪ್ರದರ್ಶನ ಕಲೆಗಳ ಕುರಿತಂತೆ ಹಲವಾರು ಆನ್ ಹಾಗೂ ಆಫ್‌ಲೈನ್ ಸ್ಪರ್ದೆಗಳು ನಡೆಯಲಿವೆ. ಇದರಲ್ಲಿ ಉಡುಪಿ ಜಿಲ್ಲೆ ಹಾಗೂ ನಾಡಿನ ನಾನಾ ಭಾಗಗಳಿಂದ ಆಗಮಿಸುವ ಮಾಧ್ಯಮ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಕಾಲೇಜಿನ ಆವರಣವನ್ನು ಈ ಬಾರಿ ವಿಷಯಾನುಸಾರ ಅಲಂಕರಿಸಲಾಗಿದ್ದು, ಇದನ್ನು ಫೆ.9ರಂದು ವಿನೋದ್ ಕೆ.ಜೋಸ್ ಉದ್ಘಾಟಿಸಲಿದ್ದಾರೆ. ಫೆ. 10ರಂದು ಸಮಾರೋಪ ಸಮಾರಂಭದಲ್ಲಿ ಸೃಜನ್‌ಪಾಲ್ ಸಿಂಗ್ ಮುಖ್ಯಅತಿಥಿಯಾಗಿ ಭಾಗವಹಿಸುವರು. ಮೂರೂ ದಿನಗಳಂದು ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಕೊನೆಯಲ್ಲಿ ವಿಜೇತರಿಗೆ ‘ಎಕ್ಸ್‌ಪ್ರೆಸ್ ಎವಾರ್ಡ್’ ನೀಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಒಸಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ಸುಬ್ರಹ್ಮಣ್ಯ ಕಿಣಿ ಕೆ. ಹಾಗೂ ದಕ್ಷತ್ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News