ರೈತರ ಆತ್ಮ ಹತ್ಯೆಯನ್ನು ತಡೆಯಲು ಗೇರು ಒಂದು ಪರ್ಯಾಯ ಬೆಳೆ- ಬಿ.ಎಚ್. ಖಾದರ್
ಮಂಗಳೂರು, ಫೆ.6: ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿದ್ದ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಮೂಲಕ ಕೆಲವು ಕಡೆ ಗೇರು ಕೃಷಿ ಮಾಡಲು ಪೋತ್ಸಾಹಿಸಲಾಯಿತು. ಹೆಚ್ಚಿನ ನೀರಿನ ಅಗತ್ಯವಿಲ್ಲದ ಗೇರು ಕೃಷಿಯ ಬಗ್ಗೆ ರೈತರು ಆಕರ್ಷಿತರಾಗುತ್ತಿರುವ ಕಾರಣ ರೈತರ ಆತ್ಮ ಹತ್ಯೆಗಳಲ್ಲಿ ಇಳಿಮುಖವಾಗಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ತಿಳಿಸಿದ್ದಾರೆ.
ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ತೋಟಗಾರಿಕಾ ವಿಶ್ವ ವಿದ್ಯಾನಿಲಯ ಶಿವಮೊಗ್ಗದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ಕೇಂದ್ರ ಕೊಚ್ಚಿನ್ ದ.ಕ ಉಡುಪಿ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ ದ.ಕ ಉಡುಪಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಗೇರು ಉತ್ಫಾದಕರ ಸಂಘ ಮಂಗಳೂರು ವತಿಯಿಂದ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಇಂದು ಹಮ್ಮಿಕೊಂಡ ಗೇರು ಬೆಳೆ ಕ್ಷೇತ್ರೋತ್ಸವ 2018ರಲ್ಲಿ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಗೇರು ಅಭಿವೃದ್ಧಿ ನಿಗಮದ ವತಿಯಿಂದ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೇರು ತೋಟಗಳಿವೆ ಈ ಬಾರಿ 65 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಬೆಲೆ ಕುಸಿತ ಹಾಗೂ ಕೃಷಿ ಬೆಳೆಗೆ ನೀರಿನ ಕೊರತೆಯಿಂದ ರೈತರ ಸಮಸ್ಯೆ ಎದುರಿಸುತ್ತಿದ್ದಾರೆ.ಮಂಡ್ಯದಲ್ಲಿ ಕಾವೇರಿ ನದಿ ನೀರನ್ನು ಕೃಷಿಗೆ ಬಳಸುವುದಕ್ಕೆ ಕಡಿವಾಣ ಹಾಕುತ್ತಿರುವ ಸನ್ನಿವೇಶ ಎದುರಾದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗೇರು ಬೆಳೆಯನ್ನು ರೈತರಿಗೆ ಪರಿಚಯಿಸಲಾಯಿತು. ಪರಿಣಾಮವಾಗಿ ಸಾಕಷ್ಟು ರೈತರಿಗೆ ಇದು ಪ್ರಯೋಜನವಾಯಿತು. ಗೇರು ನೀರಿನ ಕೊರತೆ ಇರುವ ಪ್ರದೇಶದಲ್ಲೂ ಫಸಲು ನೀಡುವ ಬೆಳೆಯಾಗಿದೆ ಎಂದು ಬಿ.ಎಚ್.ಖಾದರ್ ತಿಳಿಸಿದ್ದಾರೆ.
ಗೋಡಂಬಿ ಕೃಷಿಯ ಬಗ್ಗೆ ನಿರ್ಲಕ್ಷ ಬೇಡ :- ದೇಶದ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡ ಕೃಷಿ ಉತ್ಪನ್ನ ಗೋಡಂಬಿ .ದೇಶದ ಹಲವು ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆಗಳಲ್ಲಿ ಏರು ಪೇರು ಉಂಟಾಗಿದೆ. ಆದರೆ ಗೇರು ಉದ್ಯಮದ ಕಚ್ಚಾ ಸಾಮಾಗ್ರಿಗಳ ಕೊರತೆ ಇದೆ ವಿದೇಶದಿಂದ ಪ್ರತಿವರ್ಷ 5000 ಕೋಟಿ ರೂ ವೆಚ್ಚದ ಕಚ್ಚಾ ಸಾಮಾಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿದೇಶದ 28 ದೇಶಗಳಿಗೆ ಗೋಡಂಬಿಯನ್ನು ರಫ್ತು ಮಾಡುವ ಮೂಲಕ ದೇಶಕ್ಕೆ 5167 ಕೋಟಿ ರೂ ಲಾಭ ಬರುತ್ತಿದೆ. ಇಂತಹ ಬೆಳೆಯ ಬಗ್ಗೆ ನಿರ್ಲಕ್ಷ ಬೇಡ ಎಂದು ಗೇರು ಕೇತ್ರೋತ್ಸವನ್ನು ಉದ್ಘಾಟಿಸಿದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
2020ರ ವೇಳೆಗೆ ದೇಶದಲ್ಲಿ 15 ಲಕ್ಷ ಟನ್ ಗೊಡಂಬಿ ಬೇಡಿಕೆ ಉಂಟಾಗಲಿದೆ ಆದರೆ ಪ್ರಸಕ್ತ ದೇಶದಲ್ಲಿ ಕೇವಲ 8ಲಕ್ಷ ಟನ್ ಗೋಡಂಬಿಯನ್ನು ಮಾತ್ರ ಬೆಳೆಯಲಾಗುತ್ತಿದೆ. ದೇಶದ ಮತ್ತು ವಿದೇಶದ ಮಾರುಕಟ್ಟೆಯಲ್ಲಿಯೂ ಉತ್ತಮ ಬೇಡಿಕೆ ಇರುವ ಗೋಡಂಬಿಯನ್ನು ಬೆಲೆಯುವಲ್ಲಿ ರೈತರು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಆ ಕಾರಣದಿಂದ ಗೇರು ಕೃಷಿ ನಮ್ಮ ದೇಶದಲ್ಲಿ ಒಂದು ನಿರ್ಲಕ್ಷಿತ ಕೃಷಿಯಾಗಿ ಪರಿಗಣಿಸಲಾಗಿದೆ. ಆದರೆ ಭವಿಷ್ಯದಲ್ಲಿ ರೈತರ ಹಿತದೃಷ್ಟಿಯಿಂದ ಗೇರು ಬೆಳೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸುಧಾರಿತ ರೀತಿಯಲ್ಲಿ ಗೇರು ಕೃಷಿ ಮಾಡುವುದು ಉತ್ತಮ ಎಂದು ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ ನಾಯ್ಕ ಮಾತನಾಡುತ್ತಾ, ಕೃಷಿಕರು ಬೇರೆ ಬೇರೆ ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸಾಕಷ್ಟು ಮಂದಿ ಕೃಷಿ ಭೂಮಿಯನ್ನು ಮಾರುತ್ತಿದ್ದಾರೆ. ಇದರಿಂದ ಸಣ್ಣ ಹಿಡುವಳಿದಾರರು ಹೆಚ್ಚಾಗುತ್ತಿದ್ದರೆ. ಇದರಿಂದ ಕೃಷಿಕರು ಇನ್ನು ಕೆಲವು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಡಾ.ಎಂ.ಕೆ.ನಾಯ್ಕ ತಿಳಿಸಿದ್ದಾರೆ.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ ಸಂಪತ್ ಸಾಮ್ರಾಜ್ಯ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಉಳ್ಳಾಲ ನಗರ ಸಭೆ ಅಧ್ಯಕ್ಷ ಕೆ.ಹುಸೇನ್ ಕುಂಞ ಮೋನು, ಪುತ್ತೂರು ಗೇರು ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಗಂಗಾಧರ ನಾಯಕ್ ಬ್ರಹ್ಮಾವರ ಕೃಷಿ ಡಿ ಪ್ಲೋಮಾ ಕೇಂದ್ರದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಕೆ.ವಿ, ನಗರ ಸಭೆ ಸದಸ್ಯ ಸುಕುಮಾರ ಉಳ್ಳಾಲ ಬೈಲು ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯ ಸ್ಥ ಡಾ.ಲಕ್ಷ್ಮಣ ಸ್ವಾಗತಿಸಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಕೃಷಿಕರೊಂದಿಗೆ ಸಂವಾದ, ಕೃಷಿ ಸಾಧಕರಿಗೆ ಸನ್ಮಾನ ನಡೆಯಿತು.
ಕೃಷಿ ಸಾಧಕರ ಅಭಿಪ್ರಾಯಕೃಷಿಯನ್ನು ಮುಂದುವರಿಸಲು ಕಿರಿಯರಿಗೆ ಹಿರಿಯರ ಪೋತ್ಸಾಹ ಮುಖ್ಯ-ಚಂದ್ರ ಶೇಖರ ಗಟ್ಟಿ.
ಪತ್ರಿಕಾ ಮಾಧ್ಯಮಗಳಲ್ಲಿ ಬರುತ್ತಿದ್ದ ಕೃಷಿ ಲೇಖನ ಮಾಹಿತಿ ನನಗೆ ಸ್ಫೂರ್ತಿಯಾಗಿದೆ. ಕೀಟಬಾಧೆಯನ್ನು ನೈಸರ್ಗಿಕವಾಗಿ ಇರುವ ಕೆಂಪು ಇರುವೆಯ ಮೂಲಕ ನಿವಾರಿಸುತ್ತಿದ್ದೇನೆ.-ಎಡ್ವರ್ಡ್ ತಾಕೊಡೆ.
ದೇಶ ರಕ್ಷಣೆಗಾಗಿ ಸೈನ್ಯ ಸೇರುವಂತೆ ಕೃಷಿಗಾಗಿ ಯುವ ಕೃಷಿಕರು ಮುಂದೆ ಬರಬೇಕಾಗಿದೆ-ಪಿ.ಬಿ.ಪ್ರಭಾಕರ ರೈ ಪೆರಾಜೆ.
ಗೇರು ಮರಕ್ಕೆ ಕರಿಮೆಣಸಿನ ಬಳ್ಳಿ ಬಿಟ್ಟು ಉಪ ಬೆಳೆ ತೆಗೆಯುತ್ತಿದ್ದೇನೆ. ಆದರೆ ಕಾಲಕಾಲಕ್ಕೆ ಸೂಕ್ತ ಗೊಬ್ಬರ ಕೀಟನಾಶಕ ನಮಗೆ ಸಿಗುತ್ತಿಲ್ಲ ಈ ಬಗ್ಗೆ ಇಲಾಖೆ ಗಮನಹರಿಸಿದರೆ ಉತ್ತಮ- ಹೆನ್ರಿ ಕ್ರಾಸ್ತಾ
ಗೇರು ಕೃಷಿಗೆ ಹಾನಿ ಮಾಡುವ ಕೀಟಗಳ ನಿಯಂತ್ರಣದ ಬಗ್ಗೆ ಸೂಕ್ತ ಪರಿಹಾರ ತಜ್ಞರಿಂದ ದೊರೆಯದೆ ಇರುವುದು ವಿಷಾಧಕರ- ಕೆಂಚನೂರು ಕಿಶನ್ ಕುಮಾರ್ ಶೆಟ್ಟಿ
ಈ ಬಾರಿ ಗೇರು ಬೆಳೆ ಇಳುವರಿ ಕಡಿಮೆಯಾಗಿದೆ- ಸಂಪತ್ ಸಾಮ್ರಾಜ್ಯ.