×
Ad

ಕುಂದಾಪುರ ಪ್ರೇಮ ಪ್ರಕರಣದ ಪ್ರೇಮಿ ಆತ್ಮಹತ್ಯೆ

Update: 2018-02-06 22:33 IST

ಕುಂದಾಪುರ, ಫೆ.6: ಸುಮಾರು 26 ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುಂದಾಪುರ ಪ್ರೇಮ ಪ್ರಕರಣದ ಪ್ರೇಮಿ, ಅಂಪಾರು ಗ್ರಾಮದ ಮೂಡುಬಗೆಯ ಮಸ್ವಾಡಿ ನಿವಾಸಿ ಭಾಸ್ಕರ್ ಕೊಠಾರಿ(47) ಇಂದು ಬೆಳಗ್ಗೆ 6:30ರ ಸುಮಾರಿಗೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ತೀವ್ರ ಕುಡಿತದ ಚಟ ಹೊಂದಿದ್ದ ಭಾಸ್ಕರ್ ಕೊಠಾರಿ, ಮಾನಸಿಕ ಖಿನ್ನತೆಗೆ ಒಳಗಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸ ಲಾಗಿದೆ. ಇಂದು ನಡೆದ ಮೃತರ ತಮ್ಮ ದಿವಾಕರ್ ಎಂಬವರ ಗೃಹಪ್ರವೇಶ ಸಮಾರಂಭದಲ್ಲಿ ಭಾಸ್ಕರ್ ಸುಳಿವು ಇಲ್ಲದಾಗ ಮನೆಯವರು ಹುಡುಕಾಡಿದ್ದು, ಆಗ ಮೃತದೇಹವು ಬಾವಿಯಲ್ಲಿ ಪತ್ತೆಯಾಯಿತು ಎಂದು ತಿಳಿದುಬಂದಿದೆ. 

1992ರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಭಾಸ್ಕರ್ ಮನೆ ಸಮೀಪದ ಯುವತಿಯನ್ನು ಪ್ರೀತಿಸುತ್ತಿದ್ದರು. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಇವರಿಬ್ಬರು ನಾಪತ್ತೆಯಾಗಿದ್ದರು. ಈ ಮಧ್ಯೆ ಭಾಸ್ಕರ್‌ನನ್ನು ಕೊಲೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಕೋಮುಗಲಭೆ ಸೃಷ್ಠಿಸಿಸಲಾಗಿತ್ತು. 

ಇದೇ ವಿಚಾರದಲ್ಲಿ ಕುಂದಾಪುರದಲ್ಲಿ ಕಂಡಲ್ಲಿ ಗುಂಡು ಮತ್ತು ಕರ್ಫ್ಯೂ ವಿಧಿಸಲಾಗಿತ್ತು. ಬಳಿಕ ಪೊಲೀಸರು ಇವರಿಬ್ಬರನ್ನು ಪತ್ತೆ ಹಚ್ಚಿ ಕರೆ ತಂದು ಹಿಂದು ಪದ್ಧತಿಯಲ್ಲಿ ವಿವಾಹ ನೆರವೇರಿಸಿದ್ದರು. ಬಳಿಕ ಮುನಾವರ್ ಹೆಸರನ್ನು ಆಶಾ ಎಂದು ಬದಲಾಯಿಸಲಾಯಿತು.

ಇತ್ತೀಚೆಗೆ ಭಾಸ್ಕರ್ ಮತ್ತು ಆಶಾ ನಡುವೆ ಕೌಟುಂಬಿಕ ಜೀವನ ಸುಖಕರವಾಗಿರಲಿಲ್ಲ ಎನ್ನಲಾಗಿದೆ. ಕುಡಿತದ ಚಟಕ್ಕೆ ಒಳಗಾಗಿದ್ದ ಭಾಸ್ಕರ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಆಕೆ ಬೀಡಿ ಕಟ್ಟಿ ಜೀವನ ನಿರ್ವಹಿಸುತ್ತಿದ್ದಳು. ಇವರಿಗೆ 6 ವರ್ಷದ ಹೆಣ್ಣು ಮಗು ಇದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News