ನೋಟು ರದ್ದತಿಯ ಬಳಿಕ 21.54 ಕೋಟಿ ರೂ. ಮೊತ್ತದ ಖೋಟಾ ನೋಟು ಜಪ್ತಿ

Update: 2018-02-06 17:06 GMT

ಹೊಸದಿಲ್ಲಿ, ಫೆ.6: ಅಧಿಕ ಮುಖಬೆಲೆಯ (1,000 ರೂ. ಹಾಗೂ 500 ರೂ.) ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಒಟ್ಟು 21.54 ಕೋಟಿ ರೂ. ಮೊತ್ತದ ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಸರಕಾರ ತಿಳಿಸಿದೆ.

ಹೀಗೆ ವಶಪಡಿಸಿಕೊಳ್ಳಲಾದ ಖೋಟಾ ನೋಟುಗಳಲ್ಲಿ ಹೊಸ 2,000 ರೂ. , 500 ರೂ, 200 ರೂ. ಹಾಗೂ 100 ರೂ. ಮುಖಬೆಲೆಯ ಕರೆನ್ಸಿ ನೋಟುಗಳೂ ಸೇರಿವೆ ಎಂದು ಸಹಾಯಕ ಗೃಹ ಸಚಿವ ಹನ್ಸ್‌ರಾಜ್ ಆಹಿರ್ ಲಿಖಿತ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

 ಸರಕಾರ ನೂತನವಾಗಿ ಚಲಾವಣೆಗೆ ತಂದ 2,000 ರೂ. ಮುಖಬೆಲೆಯ 39,604 ಖೋಟಾ ನೋಟುಗಳು, 500 ರೂ. ಮುಖಬೆಲೆಯ 74,155 ಖೋಟಾ ನೋಟುಗಳನ್ನು 2016ರ ನವೆಂಬರ್ 9ರಿಂದ 2017ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಸಚಿವರು ತಿಳಿಸಿದರು. ಖೋಟಾ ಕರೆನ್ಸಿ ನೋಟುಗಳನ್ನು ಅಕ್ರಮವಾಗಿ ಚಲಾವಣೆಗೆ ತರುವ ಚಟುವಟಿಕೆಗಳನ್ನು ತಡೆಗಟ್ಟಲು ಗೃಹ ಮತ್ತು ಆರ್ಥಿಕ ಇಲಾಖೆಗಳು, ಆರ್‌ಬಿಐ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಭದ್ರತಾ ಹಾಗೂ ಗುಪ್ತಚರ ಪಡೆಗಳು ಸಂಘಟಿತ ಪ್ರಯತ್ನ ನಡೆಸಿವೆ ಎಂದು ಸಚಿವರು ತಿಳಿಸಿದ್ದಾರೆ.

  ಈ ಖೋಟಾ ನೋಟುಗಳನ್ನು ಪಾಕಿಸ್ತಾನದಲ್ಲಿ ತಯಾರಿಸಿ ಅಲ್ಲಿಂದ ಭಾರತಕ್ಕೆ ಸ್ಮಗ್ಲಿಂಗ್ ಮಾಡುತ್ತಿರುವ ಬಗ್ಗೆ ಭದ್ರತಾ ಪಡೆಗಳು ಹಾಗೂ ಗುಪ್ತಚರ ಪಡೆಗಳು ಮಾಹಿತಿ ನೀಡಿವೆ. ಆದರೆ ಪಾಕಿಸ್ತಾನದಲ್ಲಿ ಮುದ್ರಿತಗೊಳ್ಳುವ ಉತ್ತಮ ಗುಣಮಟ್ಟದ ಭಾರತೀಯ ಖೋಟಾನೋಟುಗಳನ್ನು ನೋಟು ರದ್ದತಿಯ ಬಳಿಕದ ಅವಧಿಯಲ್ಲಿ ಜಪ್ತಿ ಮಾಡಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News