ಮಂಗಳೂರು: ಎನ್‌ಎಂಪಿಟಿ ಶಿಪ್ಪಿಂಗ್ ಕಂಪೆನಿ ಕಾರ್ಮಿಕರ ಮುಷ್ಕರ ಅಂತ್ಯ
ಮಂಗಳೂರು, ಫೆ. 6: ಕನಿಷ್ಠ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಸಿಸಿಟಿಯು ಮತ್ತು ಅಖಿಲ ಭಾರತ ಬಂದರು ಕಾರ್ಮಿಕರ ಒಕ್ಕೂಟದ ಸಹಭಾಗಿತ್ವದಲ್ಲಿ ಜ.29ರಿಂದ ಎನ್‌ಎಂಪಿಟಿ ಪ್ರವೇಶ ದ್ವಾರದ ಮುಂದೆ ನಡೆಸಲಾಗುತ್ತಿದ್ದ ಶಿಪ್ಪಿಂಗ್ ಕಂಪೆನಿ ಕಾರ್ಮಿಕರ ಮುಷ್ಕರ ಮಂಗಳವಾರ ಅಂತ್ಯಗೊಂಡಿದೆ.
ಕೇಂದ್ರ ಕಾರ್ಮಿಕ ವಿಭಾಗದ ಉಪಾಯುಕ್ತರು ಮಂಗಳವಾರ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಕಾರ್ಮಿಕ ಮುಖಂಡರ ಜೊತೆ ಸಮಾಲೊಚನೆ ನಡೆಸಿದ್ದರು.
ನೌಕರರಿಗೆ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ವೇತನ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕು, ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು, ಅವರ ಕೆಲಸದ ಸ್ಥಿತಿಯಲ್ಲಿ ಬದಲಾವಣೆ ಮಾಡಬಾರದು, ನೌಕರರಿಗೆ ನೀಡಲಾಗಿದ್ದ ನೊಟೀಸ್‌ಗಳನ್ನು ಬೇಷರತ್ ವಾಪಸ್ ಪಡೆದುಕೊಳ್ಳಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ಉಪಾಯುಕ್ತರು ಶಿಪ್ಪಿಂಗ್ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದರು. ಆ ಹಿನ್ನೆಲೆಯಲ್ಲಿ ನೌಕರರು ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.
ನೌಕರರು ಕೂಡಾ ಸಂಸ್ಥೆಯ ನೀತಿ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಉಪಾಯುಕ್ತರು ಕಿವಿ ಮಾತಿದ್ದಾರೆ. ಶಿಪ್ಪಿಂಗ್ ಕಂಪೆನಿಯ ಎಲ್ಲ ಕಾರ್ಮಿಕ ರಿಗೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಕನಿಷ್ಠ ವೇತನ ದೊರೆಯಬೇಕು, ಹೆಚ್ಚುವರಿ ಕೆಲಸಕ್ಕೆ ಗಂಟೆಗೆ ತಲಾ 150 ರೂ. ನೀಡಬೇಕು, ಪ್ರತಿ ವರ್ಷ ಕನಿಷ್ಠ ವೇತನದ ಶೇ.20 ಬೋನಸ್ ನೀಡಬೇಕು, ಬಂದರಿನ ನೇರ ಕಾರ್ಮಿಕರಿಗೆ ಸಿಗುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಬೇಕು, ಸುಳ್ಳು ಕಾರಣ ನೀಡಿ ಕೆಲಸದಿಂದ ವಜಾ ಮಾಡಬಾರದು ಇತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‌ಎಂಪಿಟಿ ಶಿಪ್ಪಿಂಗ್ ಕಂಪೆನಿಯ ಸಾವಿರಕ್ಕೂ ಅಧಿಕ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದರು.
ಶಿಪ್ಪಿಂಗ್ ಕಂಪೆನಿಗಳ ಕಾರ್ಮಿಕರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಎನ್‌ಎಂಪಿಟಿ ಇತಿಹಾಸದಲ್ಲಿ ಈ ಮೊದಲ ಬಾರಿಗೆ ಮುಷ್ಕರ ನಡೆಸಿದ್ದರು. ಇದಕ್ಕೂ ಮುನ್ನ ಎನ್‌ಎಂಪಿಟಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಥಾ ನಡೆಸಿ ಗಮನ ಸೆಳೆದಿದ್ದರು.