×
Ad

ನಿಟ್ಟೆ: ‘ಡ್ರಗ್ ಮೇನಿಯಾ ತಡೆಯುವಲ್ಲಿ ಶಿಕ್ಷಕರ ಪಾತ್ರ ’ ಕಾರ್ಯಗಾರ

Update: 2018-02-06 23:40 IST

ಉಳ್ಳಾಲ, ಫೆ. 6: ದೇಶದಲ್ಲಿ ಸಾವಿರಾರು ಜನ ಆತ್ಮಹತ್ಯೆಯನ್ನು ಮಾಡುತ್ತಿದ್ದು, ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆತ್ಮಹತ್ಯೆ ಪ್ರಕರಣಗಳು ಇದೀಗ ಗ್ರಾಮೀಣ ಭಾಗದಲ್ಲೂ ವ್ಯಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಹಲವರು ವ್ಯಸನಗಳಿಗೆ ಒಳಗಾಗಿಯೇ ಆತ್ಮಹತ್ಯೆ ಗೈಯ್ಯುತ್ತಿದ್ದರೆ, ಇದರಲ್ಲಿ ಯುವ ಸಮುದಾಯದವರೇ ಹೆಚ್ಚಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್  ಹೇಳಿದರು. 

ಅವರು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಯ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಫಾರೆನ್ಸಿಕ್ ಮತ್ತು ಟಾಕ್ಸಿಕಾಲಜಿ ವಿಭಾಗಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯಲ್ಲಿ ಮಂಗಳವಾರ ಜರಗಿದ ‘ಡ್ರಗ್ ಮೇನಿಯಾ ತಡೆಯುವಲ್ಲಿ ಶಿಕ್ಷಕರ ಪಾತ್ರ ’ ಅನ್ನುವ ವಿಚಾರದ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಕ ವ್ಯಸನಿಗಳಂತಹ ದುಶ್ಚಟಗಳಿಗೆ ಯುವ ಸಮುದಾಯ ಹೆಚ್ಚಾಗಿ ಬಲಿಯಾಗುತ್ತಿದ್ದು ಇದನ್ನು ನಿರ್ಮೂಲನೆ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ಇದೊಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಲಿದೆ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ. ಯುವಸಮುದಾಯದ ಪಿಡುಗು ತೊಡಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು, ಹೆತ್ತವರು ಶಿಕ್ಷಕರು ಜಂಟಿಯಾಗಿ ಕಾರ್ಯನಿರ್ವಹಿಸಿದಲ್ಲಿ ನಿರ್ಮೂಲನೆ ಸಾಧ್ಯ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್ ರವಿಕಾಂತೇ ಗೌಡ ಐಪಿಎಸ್ ಮಾತನಾಡಿ ಮುಂದುವರಿಯುತ್ತಿರುವ ಹಾಗೂ ಅಭಿವೃದ್ಧಿ ಪಥ ದಲ್ಲಿರುವ ರಾಷ್ಟ್ರಗಳಲ್ಲಿ ಮಾದಕ ವ್ಯಸನಗಳು ಬಹುದೊಡ್ಡ ತಡೆಯನ್ನು ತರುತ್ತಿದೆ. ದೇಶದಲ್ಲಿ ನಾರ್ಕೊಟಿಕ್ಸ್ ಕಾಯ್ದೆಯಡಿ ಕೊಲೆಗೆ ಸರಿಸಮಾನವಾದ ಶಿಕ್ಷೆಯಿದೆ. ಸೇವನೆ ಪಿಡುಗು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿರುವುದರ ಬೆನ್ನಲ್ಲೇ ಯುವಸಮುದಾಯಕ್ಕೆ ಜಾಗೃತಿ ಮೂಡಿಸುವ ಚಳವಳಿಗಳು ಆರಂಭವಾಗಿದೆ. ಹೆಚ್ಚು 15-32 ವಯಸ್ಸಿನವರೇ ಪಿಡುಗಿನಲ್ಲಿ ಭಾಗಿಯಾಗುತ್ತಿದ್ದು, ಆ ವಯಸ್ಸಿನಡಿ ಶಿಕ್ಷಕರ ಜತೆಗೆ ಒಡನಾಟ ಇರುವುದರಿಂದ ಶಿಕ್ಷಕರೇ ಅವರನ್ನು ಸರಿದಾರಿಗೆ ತರಲು ಸಾಧ್ಯವಿದ್ದು, ಜತೆಗೆ ಮಾದಕ ವಸ್ತುಗಳು ಬರುವ ಮೂಲವನ್ನು ಅವರಿಂದ ಪಡೆಯುವ ಮೂಲಕ ಪೊಲೀಸರಿಗೆ ಮಾಹಿತಿಯನ್ನು ಒದಗಿಸಬಹುದಾಗಿದೆ ಎಂದರು. 

ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಯ ಉಪಕುಲಾಧಿಪತಿ ಪ್ರೊ. ಎಂ ಶಾಂತಾರಾಮ ಶೆಟ್ಟಿ ಮಾತನಾಡಿ ಮುಗ್ಧ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ದುಶ್ಚಟಗಳಿಗೆ ದಾಸರಾಗುವಂತೆ ಮಾಡುತ್ತಿರುವ ದಂಧೆ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿವೆ. ಇದರಿಂದ ದಂಧೆಕೋರರು ಅಂತಹ ಮುಗ್ಧ ವಿದ್ಯಾರ್ಥಿಗಳಿಂದ ಹಣ ಗಳಸುವ ಉದ್ದೇಶ ಹೊಂದಿರುತ್ತಾರೆ. ಇದರ ಕುರಿತು ಜಾಗೃತಿಯಾಗಬೇಕಿದೆ ಎಂದರು.

ನಿಟ್ಟೆ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ ಮುಖ್ಯಸ್ಥ ಡಾ ಮಹಾಬಲೇಶ್ ಶೆಟ್ಟಿ ಉಪಸ್ಥಿತರಿದ್ದರು. ಡಿಸಿಪಿ ಉಮಾ ಪ್ರಶಾಂತ್, ಸಹಾಯಕ ಪೊಲೀಸ್ ಆಯುಕ್ತ ಕೆ.ರಾಮರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ.ಪಿಎಸ್ ಪ್ರಕಾಶ್ ಸ್ವಾಗತಿಸಿದರು. ಡಾ ಸೂರಜ್ ಶೆಟ್ಟಿ ವಂದಿಸಿದರು. 

ಕಾರ್ಯಗಾರದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ 200 ರಷ್ಟು ಉಪನ್ಯಾಸಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News