ನರಿಕೊಂಬು: ಸಚಿವ ರೈ ಅವರಿಗೆ ಅಭಿನಂದನೆ ಕೋರಿ ಅಳವಡಿಸಿದ್ದ 20ಕ್ಕೂ ಅಧಿಕ ಬ್ಯಾನರ್‌ಗಳ ಧ್ವಂಸ

Update: 2018-02-07 12:38 GMT

ಬಂಟ್ವಾಳ, ಫೆ. 7: ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಅಭಿನಂದನೆ ಕೋರಿ ಅಳವಡಿಸಿದ್ದ, ಸುಮಾರು 20ಕ್ಕೂ ಅಧಿಕ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಒಂದೇ ರಾತ್ರಿಯಲ್ಲಿ ಹರಿದು ಹಾಕಿದ ಬಗ್ಗೆ ಬುಧವಾರ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಚಿವ ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಲ್ಲಿ ನರಿಕೊಂಬು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಹಳಷ್ಟು ನಡೆದಿದ್ದು, ಇತ್ತೀಚೆಗೆ ಸರಕಾರದ 'ಗಾಂಧಿಪಥ-ಗ್ರಾಮಪಥ' ಯೋಜನೆಯಡಿ ಸುಮಾರು 6 ಕೋಟಿ ರೂ. ಅನುದಾನದಲ್ಲಿ ಇಲ್ಲಿನ ಕರ್ಬೆಟ್ಟು, ಬೋಳಂತೂರು, ಏಳಬೆ, ಬಿಕ್ರೋಡಿ, ಏರಮಲೆ, ನಾಟಿ, ನಿನ್ನಿಪಡ್ಪು ಮೊದಲಾದ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ ಸಚಿವ ರೈ ಶಿಲಾನ್ಯಾಸ ನೆರವೇರಿಸಿದ್ದರು.

ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ವಿಶೇಷ ಅಭಿನಂದನೆ ಸಲ್ಲಿಸಿ ಗ್ರಾಮದಾದ್ಯಂತ ಬ್ಯಾನರ್-ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಕಿಡಿಗೇಡಿಗಳು ರವಿವಾರ ರಾತ್ರಿ ಏಕಕಾಲಕ್ಕೆ ಸುಮಾರು 20ಕ್ಕೂ ಅಧಿಕ ಬ್ಯಾನರ್‌ಗಳನ್ನು ಸಂಪೂರ್ಣ ಹಾನಿಗೊಳಿಸಿರುವ ಬಗ್ಗೆ ಇಲ್ಲಿನ ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.

ನರಿಕೊಂಬು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಸಚಿವ ರಮಾನಾಥ ರೈ ಅವರ ಸಾಧನೆಯ ಕಾರ್ಯವನ್ನು ಮೆಚ್ಚಿ ಇತ್ತೀಚೆಗಷ್ಟೆ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಮಾಧವ ಕರ್ಬೆಟ್ಟು ಸಹಿತ ಗ್ರಾಮದ ಹಲವು ಮಂದಿ ಬಿಜೆಪಿ ಪ್ರಮುಖರು ಸಚಿವರ ಸಮ್ಮುಖ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆ ಬಳಿಕವೂ ಗ್ರಾಮದಲ್ಲಿ ಸಚಿವರ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸರಣಿ ಮುಂದುವರಿದಿತ್ತು. ಈ ಎಲ್ಲ ಬೆಳವಣಿಗೆಯಿಂದ ಕಿಡಿಗೇಡಿಗಳು ರಾತೋರಾತ್ರಿ ಬ್ಯಾನರ್ ಹರಿಯುವ ನೀಚ ಕೃತ್ಯಕ್ಕೆ ಹಾಕಿದ್ದಾರೆ ಎಂದಿರುವ ನರಿಕೊಂಬು ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಬೋಳಂತೂರು ಅವರು, ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಬಂಧನ:

ಕಳೆದ ಶುಕ್ರವಾರ ರಾತ್ರಿ ಮೆಲ್ಕಾರ್‌ನ ಎಂ.ಎಚ್. ರಸ್ತೆ ಅಭಿವೃದ್ಧಿ ಶಿಲಾನ್ಯಾಸ ಕಾಮಗಾರಿಗೆ ಅಭಿನಂದನೆ ಕೋರಿ ಹಾಕಲಾಗಿದ್ದ ಬ್ಯಾನರೊಂದನ್ನು ಹರಿದು ಹಾಕಲಾಗಿತ್ತು. ಬಳಿಕ ಅಲ್ಲೇ ಇದ್ದ ಸಿಸಿ ಕ್ಯಾಮರಾ ಫೂಟೇಜ್ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News