×
Ad

ಉಡುಪಿ: ಅರಿವು, ಮಾಹಿತಿ ವಿನಿಮಯದಿಂದ ಎಚ್‌ಐವಿ ನಿಯಂತ್ರಣ ಸಾಧ್ಯ

Update: 2018-02-07 19:33 IST

ಉಡುಪಿ, ಫೆ.7: ಎಚ್‌ಐವಿ ಸೋಂಕಿತರ ಕುರಿತಂತೆ ಗೌಪ್ಯತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಎಚ್‌ಐವಿ ಸೋಂಕು, ಏಡ್ಸ್ ಕುರಿತಂತೆ ಅರಿವು ಹೊಂದಿ ಅನ್ಯರ ಜತೆ ಮಾಹಿತಿ ವಿನಿಮಯದಿಂದ ಜಾಗೃತಿ ಮೂಡುವಂತಾದರೆ ರೋಗ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ ಟಿ. ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ನ್ಯಾಯಾಂಗ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ತಡೆ ಗಟ್ಟುವ ಘಟಕ ಉಡುಪಿ ಹಾಗೂ ರಕ್ತ ನಿಧಿ ಕೇಂದ್ರ, ಜಿಲ್ಲಾಸ್ಪತ್ರೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿಯ ವಕೀಲರ ಸಂಘದಲ್ಲಿ ನಡೆದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಮಾಹಿತಿ ಕಾರ್ಯಾಗಾರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಏಡ್ಸ್ ಮಾರಕ ಕಾಯಿಲೆಯಾಗಿದ್ದು, ಈ ಬಗ್ಗೆ ಸಮಾಜ ಜಾಗ್ರತೆ ವಹಿಸ ಬೇಕಾದ ಅವಶ್ಯವಿದೆ. ರೋಗಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ. ಸೋಂಕು ಬರದಂತೆ ಇತರ ಇಲಾಖೆಗಳು ಆರೋಗ್ಯ ಇಲಾಖೆ ಯೊಂದಿಗೆ ಸೇರಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ಬಗ್ಗೆ ಮಾಹಿತಿ ವಿನಿಮಯ ಅಗತ್ಯವಾಗಿದೆ ಎಂದರು.

ಸಮಾಜದಲ್ಲಿ ಎಚ್‌ಐವಿ ಸೋಂಕಿತರ ತಾರತಮ್ಯ ತಡೆಗಟ್ಟಲು, ಅವರಿಗಿರುವ ಹಕ್ಕುಗಳ ಮಾಹಿತಿ ನೀಡಿ, ಜೀವನಕ್ಕೆ ಅನುಕೂಲಕರ ರೀತಿಯಲ್ಲಿ ಕಾನೂನನ್ನು 2017ರಲ್ಲಿ ಜಾರಿಗೊಳಿಸಲಾಗಿದೆ. ಸೋಂಕಿತರು ನ್ಯಾಯಾಂಗಕ್ಕೆ ಬಂದಾಗ ಗೌಪ್ಯತೆ ಕಾಪಾಡುವ ಜವಾಬ್ದಾರಿಯೂ ನ್ಯಾಯಾಂಗಕ್ಕಿದೆ ಎಂದು ವೆಂಕಟೇಶ್ ನಾಯ್ಕ ತಿಳಿಸಿದರು.

ಸಮಾಜದಲ್ಲಿ ಎಚ್‌ಐವಿ ಸೋಂಕಿತರ ತಾರತಮ್ಯ ತಡೆಗಟ್ಟಲು, ಅವರಿಗಿರುವ ಹಕ್ಕುಗಳ ಮಾಹಿತಿ ನೀಡಿ, ಜೀವನಕ್ಕೆ ಅನುಕೂಲಕರ ರೀತಿಯಲ್ಲಿ ಕಾನೂನನ್ನು 2017ರಲ್ಲಿ ಜಾರಿಗೊಳಿಸಲಾಗಿದೆ. ಸೋಂಕಿತರು ನ್ಯಾಯಾಂಗಕ್ಕೆ ಬಂದಾಗ ಗೌಪ್ಯತೆ ಕಾಪಾಡುವ ಜವಾಬ್ದಾರಿಯೂ ನ್ಯಾಯಾಂಗಕ್ಕಿದೆ ಎಂದು ವೆಂಕಟೇಶ್ ನಾಯ್ಕಿ ತಿಳಿಸಿದರು. ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ಮಾತನಾಡಿ, ವಿಶ್ವದಲ್ಲಿ 21 ಲಕ್ಷ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತಿದ್ದು, ಇವರಲ್ಲಿ ಶೇ.86ರಷ್ಟು 15ರಿಂದ 49 ವಯೋಮಾನದವರು ಎಂಬುದು ಅತ್ಯಂತ ಕಳವಳಕರ ಸಂಗತಿ. ಇದರಿಂದ ಆ ಕುಟುಂಬ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಳಲುವಂತಾಗಿದೆ ಎಂದರು.

ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಭಾರತ, ವಿಶ್ವದಲ್ಲೇ ಮೂರನೇ ಸ್ಥಾನ ದಲ್ಲಿದ್ದರೂ, ಕರ್ನಾಟಕದಲ್ಲಿ 2001ರಿಂದ 2015ರವರೆಗಿನ ಅಂಕಿಅಂಶ ನೋಡಿ ದಾಗ, ಎಚ್‌ಐವಿ ಪೀಡಿತರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬರುತ್ತದೆ. ರಾಜ್ಯದಲ್ಲಿ ಮಹಿಳೆಯರಿಗಾಗಿ ವಿಶೇಷ ವಸತಿ ಯೋಜನೆ, ಮೀಸಲಾತಿ, ಸಾಲ ನೀಡುವುದು, ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಎಚ್‌ಐವಿ ಸೋಂಕಿತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನ ನೀಡಲುಅವಕಾಶವಿದೆ. ಉಡುಪಿ ಖಾಸಗಿ ಬಸ್‌ನಲ್ಲಿ ಶೇ.50ರಷ್ಟು ರಿಯಾಯಿತಿಯೂ ಲಭ್ಯವಿದೆ ಎಂದವರು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಎಚ್‌ಐವಿ ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಬಳಕೆ, ಪರೀಕ್ಷೆ ಮಾಡದೇ ರಕ್ತ ಪಡೆಯುವುದು (ಪರವಾನಿಗೆ ರಹಿತ ರಕ್ತಸಂಗ್ರಹ ಘಟಕದಿಂದ) ಹಾಗೂ ತಾಯಿಯಿಂದ ಮಗುವಿಗೆ ಹೀಗೆ 4 ವಿಧದಲ್ಲಿ ರೋಗ ಹರಡುತ್ತಿದ್ದು, ಕೊಂಚ ಎಚ್ಚರಿಕೆ ವಹಿಸಿದರೆ ರೋಗದಿಂದ ದೂರವಿರಲು ಸಾಧ್ಯವಿದೆ ಎಂದರು.

ಎಚ್‌ಐವಿ ಸೋಂಕಿತ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿ ಅಗತ್ಯ ಚಿಕಿತ್ಸೆ ಕೊಟ್ಟರೆ ತಾಯಿಯಿಂದ ಮಗುವಿಗೆ ಬರುವ ಎಚ್‌ಐವಿಯನ್ನು ಶೇ.100ರಷ್ಟು ಬರದಂತೆ ತಡೆಯಲು ಸಾಧ್ಯವಿದೆ. ತಾಯಿಯಿಂದ ಮಗುವಿಗೆ ಹರಡಿದ ಸೋಂಕಿಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಸದ್ಯ 247 ಮಕ್ಕಳಿದ್ದಾರೆ ಎಂದು ಡಾ.ಚಿದಾನಂದ ವಿವರಿಸಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್.ಪಂಡಿತ್, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವೀಣಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಎ.ಹೆಬ್ಬಾರ್ ಉಪಸ್ಥಿತರಿದ್ದರು.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ಕಾರ್ಯಕ್ರಮ ನಿರೂಪಿಸಿದರಲ್ಲದೇ ಸಂನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News