ಉಡುಪಿ ನಗರಸಭೆ: 8 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಚಿವ ಪ್ರಮೋದ್ ಚಾಲನೆ
ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯ ಒಟ್ಟು 19 ವಾರ್ಡ್ ಗಳಲ್ಲಿ ಒಟ್ಟು 8 ಕೋಟಿ ರೂ. ವೆಚ್ಚದ 47 ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ನೆರವೇರಿಸಿದರು.
ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 5.5ಕೋಟಿ ರೂ. ವೆಚ್ಚದ ಕಾಮಗಾರಿ ಗಳಿಗೆ ಶಿಲಾನ್ಯಾಸ ಹಾಗೂ ಇತರ ಅನುದಾನದಡಿ ಒಂದು ಕೋಟಿ ರೂ. ವೆಚ್ಚದಲ್ಲಿ ಗೋಪಾಲಪುರ ವಾರ್ಡ್‌ನಲ್ಲಿ ನೂತನ ಮಾರ್ಕೆಟ್ ಯಾರ್ಡ್ ನಿರ್ಮಾಣದ ಶಿಲಾನ್ಯಾಸ ಮತ್ತು ಗೋಪಾಲಪುರ ವಾರ್ಡಿನಲ್ಲಿ 151.60ಲಕ್ಷ ರೂ. ವೆಚ್ಚದಲ್ಲಿ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ನೆರವೇರಿಸಲಾಯಿತು.
‘ಕಳೆದ ತಿಂಗಳು ಮುಖ್ಯಮಂತ್ರಿಗಳು ಬ್ರಹ್ಮಾವರದಲ್ಲಿ ಸಾಂಕೇತಿಕವಾಗಿ ಶಂಕು ಸ್ಥಾಪನೆ ಮಾಡಿರುವ ನಗರಸಭೆಯ ಒಟ್ಟು 35ವಾರ್ಡ್‌ಗಳಲ್ಲಿ 81 ಕಾಮಗಾರಿ ಗಳಿಗೆ ಎರಡು ಹಂತಗಳಲ್ಲಿ ಚಾಲನೆ ನೀಡಲಾಗುತ್ತಿದ್ದು, ಮೊದಲನೆ ಹಂತದ ಶಿಲಾನ್ಯಾಸವನ್ನು ಇಂದು ನೆರವೇರಿಸಲಾಯಿತು. ಎರಡನೆ ಹಂತದಲ್ಲಿ ಫೆ.15 ರಂದು ಉಳಿದ 16ವಾರ್ಡ್‌ಗಳಲ್ಲಿ ಒಟ್ಟು 7ಕೋಟಿ ರೂ. ವೆಚ್ಚದ 34 ಕಾಮ ಗಾರಿಗಳ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಪ್ರತಿವಾರ ಸಂತೆ ನಡೆಯು ತ್ತಿದ್ದು, ಇದರಿಂದ ರಸ್ತೆ ಸಂಚಾರ ಮತ್ತು ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಅಲ್ಲದೇ ಕಿರಿದಾದ ಪ್ರದೇಶದಲ್ಲಿ ಸಂತೆ ನಡೆಯುವುದರಿಂದ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗೋಪಾಲಪುರ ವಾರ್ಡ್‌ನಲ್ಲಿ 1.5ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾರ್ಕೆಟ್ ಯಾರ್ಡ್ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಒಂದು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಸಂತೆಯನ್ನು ಇಲ್ಲಿಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು.
ಬಳಿಕ ಸಚಿವರು ಕರಾವಳಿ ಬೈಪಾಸ್ ಬಳಿಯ ವೆಟ್‌ವೆಲ್ ಮೂರರಲ್ಲಿ ಡ್ರೈವೇಸ್ಟ್, ಇ-ವೇಸ್ಟ್ ಕಲೆಕ್ಷನ್ ಸೆಂಟರ್‌ನ್ನು ಸಚಿವರು ಉದ್ಘಾಟಸಿದರು. ಮ್ಯಾನ್‌ಹೋಲ್‌ಗಳಲ್ಲಿ ಸಂಗ್ರಹವಾದ ಸಿಲ್ಟ್ ತೆಗೆಯುವ 9.18 ಲಕ್ಷ ರೂ. ವೆಚ್ಚದ ಡಿಸಿಲ್ಟಿಂಗ್ ವಾಹನದ ಲೋಕಾರ್ಪಣೆಯನ್ನು ಮಾಡಲಾಯಿತು. 11 ಲಕ್ಷ ರೂ. ವೆಚ್ಚದ ಪ್ರಾಥಮಿಕ ಕಸ ಸಂಗ್ರಹಣಾ ವಾಹನಗಳು ಹಾಗೂ 10 ಸಂಖ್ಯೆಯ ಟ್ರಾಲಿ ಸಹಿತ 40 ಲೀಟರ್ ಸಾಮರ್ಥ್ಯದ ಡಸ್ಟ್‌ಬಿನ್‌ಗಳ ಹಸ್ತಾಂತರ ಕಾರ್ಯಕ್ರಮವನ್ನು ಸಚಿವರು ನೆರವೇರಿಸಿದರು.
ಇಂದು ಬೆಳಗ್ಗೆ 8ರಿಂದ ಸಂಜೆ 6.20ರವರೆಗೆ ಗೋಪಾಲಪುರ ವಾರ್ಡ್‌ನಲ್ಲಿ ಏಳು, ಸುಬ್ರಹ್ಮಣ್ಯನಗರ ವಾರ್ಡ್‌ನಲ್ಲಿ ಎರಡು, ಕೊಡಂಕೂರು ವಾರ್ಡ್‌ನಲ್ಲಿ ನಾಲ್ಕು, ನಿಟ್ಟೂರು ವಾರ್ಡ್‌ನಲ್ಲಿ ಎರಡು, ಮೂಡಬೆಟ್ಟು ವಾರ್ಡ್‌ನಲ್ಲಿ ಮೂರು, ಕೊಡವೂರು ವಾರ್ಡ್‌ನಲ್ಲಿ ನಾಲ್ಕು, ವಡಭಾಂಡೇಶ್ವರ ವಾರ್ಡ್‌ನಲ್ಲಿ ಮೂರು, ಕೊಳ ವಾರ್ಡ್‌ನಲ್ಲಿ ಎರಡು, ಕಲ್ಮಾಡಿ ವಾರ್ಡ್‌ನಲ್ಲಿ ಎರಡು, ಚಿಟ್ಪಾಡಿ, ಬಡಗಬೆಟ್ಟು, ಬೈಲೂರು, ಒಳಕಾಡು, ಇಂದ್ರಾಳಿ, ಮಣಿಪಾಲ, ಈಶ್ವರನಗರ ವಾರ್ಡ್‌ಗಳಲ್ಲಿ ಒಟ್ಟು ಏಳು, ಇಂದಿರಾನಗರ ವಾರ್ಡ್‌ನಲ್ಲಿ ಏಳು, ಕಸ್ತೂರ್ಬಾನಗರ ವಾರ್ಡ್‌ನಲ್ಲಿ ಆರು, ಗುಂಡಿಬೈಲು ವಾರ್ಡ್‌ನಲ್ಲಿ ಮೂರು, ಕಡಿಯಾಳಿ ವಾರ್ಡ್‌ನಲ್ಲಿ ಮೂರು, ಕುಂಜಿಬೆಟ್ಟು ವಾರ್ಡ್‌ನಲ್ಲಿ ಮೂರು, ಸಗ್ರಿ ವಾರ್ಡ್‌ನಲ್ಲಿ ಐದು, ಪರ್ಕಳ ವಾರ್ಡ್‌ನಲ್ಲಿ ಎರಡು, ಶೆಟ್ಟಿಬೆಟ್ಟು ವಾರ್ಡ್‌ನಲ್ಲಿ ಮೂರು, ಸರಳಬೆಟ್ಟು ವಾರ್ಡ್‌ನಲ್ಲಿ ನಾಲ್ಕು, ಮೂಡುಪೆರಂಪಳ್ಳಿ ವಾರ್ಡ್‌ನಲ್ಲಿ ಐದು, ಕರಂಬಳ್ಳಿ ವಾರ್ಡ್‌ನಲ್ಲಿ ನಾಲ್ಕು ಕಾಮಗಾರಿಗಳ ಶಿಲಾ ನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ, ಸದಸ್ಯರಾದ ಚಂದ್ರಕಾಂತ್ ನಾಯಕ್, ಪಿ.ಯುವರಾಜ್, ಜಾನಕಿ ಗಣಪತಿ ಶೆಟ್ಟಿಗಾರ್, ಪ್ರಶಾಂತ್ ಭಟ್, ನಾರಾಯಣ ಕುಂದರ್, ಪ್ರಶಾಂತ್ ಕೊಳ, ಗಣೇಶ್ ನೆರ್ಗಿ, ಸೆಲಿನಾ ಕರ್ಕಡ, ಪೌರಾಯುಕ್ತ ಡಿ.ಮಂಜುನಾಥಯ್ಯ ಮೊದಲಾದವರು ಉಪಸ್ಥಿತರಿದ್ದರು.