ಸುರತ್ಕಲ್ ಟೋಲ್ ಗೇಟ್ ರದ್ದಾಗುವವರೆಗೆ ಹೋರಾಟ: ಮುನೀರ್ ಕಾಟಿಪಳ್ಳ
ಮಂಗಳೂರು, ಫೆ. 7: ಸುರತ್ಕಲ್ ಟೋಲ್ ಗೇಟ್ ಅನ್ನು ಸ್ಥಗಿತಗೊಳಿಸುವ ಪ್ರಸ್ತಾಪ ಈಗ ಸರ್ಕಾರದವರೆಗೆ ಹೋಗಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆ ನವೀಕರಿಸದಿರುವಂತೆ ಪ್ರಸ್ತಾಪ ಸಲ್ಲಿಕೆಯಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಹಲವು ಜನಹೋರಾಟಗಳ ನಂತರ ಇಂಥದೊಂದು ಪ್ರಸ್ತಾಪ ಮುಂದಿಡಲಾಗಿದೆ. ಇದೇನೂ ಹೊಸತಲ್ಲ. ಈ ಹಿಂದೆಯೂ ಟೋಲ್ ಗೇಟ್ ಆರಂಭವಾಗುವ ಸಂದರ್ಭದಲ್ಲಿ ಇಂಥದ್ದೇ ಮಾತುಗಳು ಕೇಳಿ ಬಂದಿದ್ದವು. ಹೆಜಮಾಡಿ ಟೋಲ್ ಗೇಟ್ ಆರಂಭವಾದ ಮೇಲೆ ಅದರಲ್ಲಿ ಸುರತ್ಕಲ್ ಟೋಲ್ ಅನ್ನು ವಿಲೀನಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆಯನ್ನು ಈಡೇರಿಸದೆ, ಟೆಂಡರ್ ಮುಗಿದ ನಂತರ ಅದನ್ನು ನವೀಕರಿಸಿ ಜನರನ್ನು ಲೂಟಿ ಮಾಡಲಾಗುತ್ತಿದೆ ಇಂತಹ ಸುಲಿಗೆಗೆ ಈ ಭಾಗದ ಶಾಸಕರು, ಲೋಕಸಭಾ ಸದಸ್ಯರ ಬೇಜವಾಬ್ದಾರಿತನ ಕಾರಣ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಜುಲೈ ತಿಂಗಳಲ್ಲಿ ಟೆಂಡರ್ ಅವಧಿ ಮುಗಿದ ನಂತರ ಟೋಲ್ ಗೇಟ್ ಅನ್ನು ರದ್ದುಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆ ಮುಗಿಯುವ ವೇಳೆಗೆ ಟೋಲ್ ಗೇಟ್ ನವೀಕರಣಗೊಳ್ಳುವ ಅವಧಿ ಬರುತ್ತದೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ಜನಾಕ್ರೋಶವನ್ನು ಶಮನಗೊಳಿಸಲು ಈ ಪ್ರಸ್ತಾಪವನ್ನು ಮುಂದಿಟ್ಟಿರಬಹುದು. ಆದರೆ ಈ ಬಗ್ಗೆ ಯಾವುದೇ ಭರವಸೆ ಇಟ್ಟುಕೊಳ್ಳುವ ಹಾಗಿಲ್ಲ. ಮತ್ತೆ ಪ್ರಸ್ತಾಪವನ್ನು ತಿರಸ್ಕರಿಸಿ ಪುನಃ ಟೆಂಡರ್ ಕರೆಯುವ ಅಪಾಯ ಇದ್ದೇ ಇದೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಜನಪ್ರತಿನಿಧಿಗಳ ಬಾಯಿ ಮಾತಿನ ಭರವಸೆಗೆ ನಾಗರಿಕರು ಬಲಿಯಾಗಬಾರದು. ಪ್ರಸ್ತಾಪವು ನಿರ್ಣಯವಾಗಿ ಅಂಗೀಕಾರಗೊಂಡು ಟೋಲ್ ಗೇಟ್ ರದ್ದಾಗುವವರೆಗೆ ಹೋರಾಟ ಮುಂದುವರೆಸಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.