ಪತ್ನಿಯ ಚಿಕಿತ್ಸೆಗಾಗಿ ಊರೂರು ಅಲೆಯುತ್ತಿರುವ ಪತಿ !
ಮಂಗಳೂರು, ಫೆ. 7: ಕಳೆದ ಏಳು ವರ್ಷಗಳಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಮಾನಸಿಕವಾಗಿಯೂ ಅಸ್ವಸ್ಥರಾಗಿರುವ ಪತ್ನಿಯ ಆರೈಕೆಗಾಗಿ ಊರೂರು ಅಲೆಯುವ ಪರಿಸ್ಥಿತಿ ಗದಗ ಮೂಲಕ ಕಾಶೀನಾಥ ಚಿತ್ರಗಾರರದ್ದು. ಆರ್ಥಿಕವಾಗಿ ಸಂಕಷ್ಟದಲ್ಲಿರುವ 65ರ ಹರೆಯದ ಕಾಶೀನಾಥ ಗಣಪತಿ ರಾವ್ ಅವರು ತಮ್ಮ ಪತ್ನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಇರಾದೆಯೊಂದಿಗೆ ಮಂಗಳೂರಿನಲ್ಲಿ ಅಲೆಯುತ್ತಿದ್ದು, ಸಹೃದಯಿಗಳಿಗೆ ಮೊರೆ ಹೋಗಿದ್ದಾರೆ.
ಕಾರ್ಪೆಂಟರ್ (ಬಡಗಿ) ವೃತ್ತಿ ಮಾಡುತ್ತಿದ್ದ ಗಣಪತಿ ರಾವ್ ಅವರ ಪತ್ನಿ ಗಂಗೂಬಾಯಿ (56) ತಮ್ಮೆರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದು, ಅವರ ಚಿಕಿತ್ಸೆಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗಿ ಇದೀಗ ಸಹೃದಯಗಳ ಸಹಾಯ ಯಾಚಿಸಿದ್ದಾರೆ.
ಕಾಶೀನಾಥ ಚಿತ್ರಗಾರ ಅವರ ಪತ್ನಿ ಗಂಗೂಬಾಯಿಯೇ ಕಾಲು ಸ್ವಾಧೀನ ಕಳೆದುಕೊಂಡ ಜತೆಯಲ್ಲೇ ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದಾರೆ. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೂ ಅವರು ಇತರರನ್ನು ಅವಲಂಬಿಸಿದ್ದಾರೆ. ಕಾಶೀನಾಥ್ ಹಾಗೂ ಅವರ ಕೊನೆಯ ಪುತ್ರ ಸೇರಿಕೊಂಡು ಪ್ರಸ್ತುತ ಗಂಗೂಬಾಯಿ ಅವರ ಆರೈಕೆ ಮಾಡುತ್ತಿದ್ದಾರೆ. ಪತ್ನಿಗೆ ಚಿಕಿತ್ಸೆ ಕೊಡಿಸಿ ಆಕೆಯ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಆಸ್ಪತ್ರೆಗಳಿಗೆ ಹೊತ್ತೊಯ್ದಿದ್ದಾರೆ. ಚಿಕಿತ್ಸೆಗೆ ಸುಮಾರು ನಾಲ್ಕೈದು ಲಕ್ಷ ರೂ. ವೆಚ್ಚವಾಗಲಿದೆ ಎಂಬ ವೈದ್ಯರು ಹೇಳಿರುವುದರಿಂದ ಜೀವನೋಪಾಯಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿಯಲ್ಲಿರುವ ಕಾಶೀನಾಥ್ ತಮ್ಮ ಪತ್ನಿಯ ಚಿಕಿತ್ಸೆಗಾಗಿ ಕಂಗಾಲಾಗಿದ್ದಾರೆ.
‘ಈಗಾಗಲೇ ಪತ್ನಿಯ ಔಷಧಿ ವೆಚ್ಚಕ್ಕಾಗಿ ಸಾವಿರಾರು ರೂ.ಗಳನ್ನು ಖರ್ಚು ಮಾಡಿದ್ದೇನೆ. ನನ್ನ ಬಳಿ ಜಮೀನು, ಆಸ್ತಿ ಇಲ್ಲ. ಮೂವರು ಗಂಡು ಮಕ್ಕಳಲ್ಲಿ ಇಬ್ಬರಿಗೆ ವಿವಾಹವಾಗಿದೆ. ಕೊನೆಯ ಪುತ್ರ ಟಿಸಿಎಚ್ ಮಾಡಿದರೂ, ಉದ್ಯೋಗ ದೊರಕಿಲ್ಲ. ಮಕ್ಕಳು ಸಣ್ಣ ಪುಟ್ಟ ಕೆಲಸ ನಿರ್ವಹಿಸುತ್ತಿದ್ದು, ಅವರ ಖರ್ಚಿಗೇ ಸಾಕಾಗುತ್ತಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾಯಿತು. ಆದರೆ ಈವರೆಗೆ ನೆರವು ದೊರಕಿಲ್ಲ. ಚಿಕಿತ್ಸೆಗೆ ನೆರವು ಕೋರಿ ಕಳೆದ ನಾಲ್ಕೈದು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಎಲ್ಲವೂ ಕೇವಲ ಪತ್ರ ವ್ಯವಹಾರದಲ್ಲಿಯೇ ನಡೆಯುತ್ತಿದೆ. ಆದರೆ ನೆರವು ಮಾತ್ರ ದೊರಕುತ್ತಿಲ್ಲ’’ ಎಂದು ಕಾಶೀನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
‘‘ಸರಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ನಮ್ಮಂತಹ ಬಡವರಿಗೆ ಅದು ದೊರೆಯುತ್ತಿಲ್ಲ. ಜನಪ್ರತಿನಿಧಿಗಳ ಮೇಲೆ ನಂಬಿಕೆ ಇಟ್ಟು ಕಷ್ಟ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಇದೀಗ ನಾನು ಮಂಗಳೂರಿಗೆ ಬಂದು ಇಲ್ಲಿ ಸಹಾಯ ಯಾಚನೆ ಮಾಡುತ್ತಿದ್ದು, ಸಿಗುವ ನೆರವಿನಲ್ಲಿ ಬೆಂಗಳೂರಿನ ನಿಮಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕೆಂದಿದ್ದೇನೆ. ನನ್ನ ಪತ್ನಿ ಮೊದಲಿನಂತಾದರೆ ಸಾಕು ನನಗೆ’’ಎಂದು ಅವರು ಹೇಳುತ್ತಾರೆ.
ಕಾಶೀನಾಥ ಗಣಪತಿ ರಾವ್ ಚಿತ್ರಗಾರ ಅವರ ಪತ್ನಿಯ ಚಿಕಿತ್ಸೆಗೆ ನೆರವಾಗಲು ಬಯಸುವವರು, ಕಾಶೀನಾಥ ಗಣಪತರಾವ್ ಚಿತ್ರಗಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ:17194029499, ಐಎಫ್ಎಸ್‌ಸಿ ಕೋಡ್: KVGB0006311ಗೆ ನೆರವು ನೀಡಬಹುದು. ಕಾಶೀನಾಥ್‌ರ ಮೊಬೈಲ್ ಸಂಖ್ಯೆ 8762333201.