ಧಾರ್ಮಿಕ ದತ್ತಿ ಕಾಯ್ದೆಗೆ ಶ್ರೀಕೃಷ್ಣ ಮಠ ಸೇರ್ಪಡೆ: ಕಾನೂನು, ಭಾವನೆ ಹಿನ್ನೆಲೆಗಳ ವಿಮರ್ಶೆ ಅಗತ್ಯ: ಸಚಿವ ಪ್ರಮೋದ್
ಉಡುಪಿ, ಫೆ.7: ಧಾರ್ಮಿಕ ದತ್ತಿ ಕಾಯಿದೆಯ ವ್ಯಾಪ್ತಿಗೆ ಉಡುಪಿ ಶ್ರೀಕೃಷ್ಣ ಮಠವನ್ನು ಸೇರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವಾಗ ಕಾನೂನು ಹಾಗೂ ಭಾವನಾತ್ಮಕ ಹಿನ್ನೆಲೆಗಳ ಬಗ್ಗೆ ವಿಮರ್ಶೆ ಮಾಡಬೇಕು. ಇದರಿಂದ ಯಾರ ಮನಸ್ಸಿಗೂ ನೋವು ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಧಾರ್ಮಿಕ ದತ್ತಿ ಕಾಯಿದೆಯ ನೂತನ ಕರಡನ್ನು ರಚಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಅದರಂತೆ ರಾಜ್ಯ ಸರಕಾರ ಮಠ ಮಂದಿರ, ಸ್ವಾಮೀಜಿ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಮಾಡು ತ್ತಿದೆ ಎಂದು ಅವರು ತಿಳಿಸಿದರು.
ಮೃದು ಹಿಂದುತ್ವದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರಕಾರ ಹಿಂದುಗಳಿಗೆ ಮಾಡಿದ್ದಷ್ಟು ಕೆಲಸ ಯಾವುದೇ ಸರಕಾರ ಮಾಡಿಲ್ಲ. ದೇವಸ್ಥಾನ ಗಳ ವಾರ್ಷಿಕ ತಸ್ತಿಕ್‌ನ್ನು 28ಸಾವಿರ ರೂ.ನಿಂದ 48ಸಾವಿರ ರೂ.ಗೆ ಏರಿಸ ಲಾಗಿದೆ ಎಂದರು. ಮೀನುಗಾರರಿಗೆ ಸಬ್ಸಿಡಿ ದರದ ಸೀಮೆಎಣ್ಣೆ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರಕಾರ ಸೀಮೆಎಣ್ಣೆ ಕೋಟಾ ಕಡಿತ ಮಾಡುತ್ತಿದ್ದು, ಪಡಿತರ ವ್ಯವಸ್ಥೆಯ ಸೀಮೆಎಣ್ಣೆಯನ್ನು ಮೀನುಗಾರರಿಗೆ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.