ಫೆ.11ರಿಂದ ಸುಮನಸಾ ನಾಟಕೋತ್ಸವ ‘ರಂಗಹಬ್ಬ-6’
ಉಡುಪಿ, ಫೆ.7: ಇಲ್ಲಿನ ಸುಮನಸಾ ಕೊಡವೂರು ಇದರ ಆರನೇ ವರ್ಷದ ನಾಟಕೋತ್ಸವ ‘ರಂಗಹಬ್ಬ-6’ ಫೆ.11ರಿಂದ 17ರವರೆಗೆ ಪ್ರತಿದಿನ ಸಂಜೆ 6:30ಕ್ಕೆ ಉಡುಪಿ ಅಜ್ಜರಕಾಡಿನ ಭುಜಂಗಪಾರ್ಕ್‌ನ ಬಯಲುರಂಗ ಮಂದಿರದಲ್ಲಿ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ.ಎಸ್. ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ನಗರಸಭೆ ಉಡುಪಿ, ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಹಾಗೂ ಶ್ರೀಪೇಜಾವರ ಅಧೋಕ್ಷಜ ಮಠಗಳ ಸಂಯುಕ್ತ ಆಶ್ರಯದಲ್ಲಿ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು.
ನಾಟಕೋತ್ಸವವನ್ನು ಫೆ.11ರ ಸಂಜೆ 6ಗಂಟೆಗೆ ಬೆಂಗಳೂರಿನ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ಜಿಲ್ಲೆಯ ರಂಗಸಾಧಕರಿಗೆ ಸನ್ಮಾನ, ಅದೃಷ್ಠ ಪ್ರೇಕ್ಷಕರಿಗೆ ಪ್ರತಿದಿನ ವಿಶೇಷ ಉಡುಗೊರೆ ಹಾಗೂ ನಾಡಿನ ವಿವಿಧ ತಂಡಗಳಿಂದ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಅಲ್ಲದೇ ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಮೂಡಿಸಲು ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಫೆ.12ರಂದು ಏಕಪಾತ್ರಾಭಿನಯ, ಫೆ.14ರಂದು ಆಶು ನಟನೆ ಹಾಗೂ ಫೆ.16ರಂದು ಮೂಕಾಭಿನಯ ಸ್ಪರ್ಧೆ ಆಯಾ ದಿನಗಳಂದು ಸಂಜೆ 4ರಿಂದ 5ಗಂಟೆಯವರೆಗೆ ನಡೆಯಲಿದೆ ಎಂದರು.
ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ವಿವರ ಹೀಗಿದೆ. ಫೆ.11ರಂದು ತಕ್ಷ್ ಥಿಯೇಟರ್ಸ್ ಬೆಂಗಳೂರು ಇವರಿಂದ ಅಕ್ಷಯ್ ಕಾರ್ತಿಕ್ ನಿರ್ದೇಶನದಲ್ಲಿ ಕನ್ನಡ ನಾಟಕ ‘ಥ್ರೀ ರೋಸಸ್’, 12ರಂದು ಮೈಸೂರಿನ ರಂಗಾಯಣದಿಂದ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಯಶವಂತ ಚಿತ್ತಾಲರ ‘ಶಿಕಾರಿ’ ನಾಟಕ ರೂಪಾಂತರ, 13ರಂದು ರಂಗಾಯಣದಿಂದ ಬಿ.ವಿ.ಕಾರಂತ ನಿರ್ದೇಶನದ ಕನ್ನಡ ನಾಟಕ ಶ್ರೀರಂಗರ ‘ಕತ್ತಲೆ ಬೆಳಕು’.
ಫೆ.14ರಂದು ರಾತ್ರಿ 7ಕ್ಕೆ ಸುಮನಸಾ ಕೊಡವೂರು ಇವದಿಂದ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಏಕವ್ಯಕ್ತಿ ಪ್ರಯೋಗ ‘ನೆರಳು’ ಹಾಗೂ 8 ರಿಂದ ಬೆಂಗಳೂರಿನ ಚಂದ್ರಶೇಖರ ಪ್ರತಿಷ್ಠಾನದಿಂದ ಮಹಂತೇಶ್ ದೇಂಗಾವಿ ನಿರ್ದೇಶನದಲ್ಲಿ ಕನ್ನಡ ನಾಟಕ ‘ಬಲಿದಾನ’ ಪ್ರದರ್ಶನಗೊಳ್ಳಲಿದೆ.
ಫೆ.15ರಂದು ಸುಮನಸಾ ಕೊಡವೂರು ಇವರಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಯಕ್ಷನಾಟಕ ‘ಚಿತ್ರಪಟ ರಾಮಾಯಣ’, 16ರಂದು ಮಂಗಳೂರು ನಂದಗೋಕುಲ ತಂಡದಿಂದ ವಿದ್ದು ಉಚ್ಚಿಲ್ ನಿರ್ದೇಶನದ ಕನ್ನಡ ನೃತ್ಯ ನಾಟಕ ಪುತಿನಾರ ‘ಗೋಕುಲ ನಿರ್ಗಮನ’, 17ರಂದು ಸುಮನಸಾ ಕೊಡವೂರು ಇವರಿಂದ ಗುರುರಾಜ ಮಾರ್ಪಳ್ಳಿ ನಿರ್ದೇಶನದ ಕನ್ನಡ ನಾಟಕ ರವೀಂದ್ರನಾಥ ಠಾಗೋರ್‌ರ ‘ರಥಯಾತ್ರೆ’.
ಫೆ.17ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕಳೆದ ವರ್ಷ ನಿಧನರಾದ ಯಕ್ಷಗುರು ಯು.ದುಗ್ಗಪ್ಪ ಹೆಸರಿನಲ್ಲಿ ಸ್ಥಾಪಿಸಲಾದ ಯಕ್ಷಸುಮ ಪ್ರಶಸ್ತಿಯನ್ನು ಅಂಬಾತನಯ ಮುದ್ರಾಡಿ ಇವರಿಗೆ ನೀಡಿ ಗೌರವಿಸಲಾಗುವುದು. ಗುರುರಾಜ ಮಾರ್ಪಳ್ಳಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ಗಣೇಶ ರಾವ್ ಎಲ್ಲೂರು, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.