×
Ad

ಉಳ್ಳಾಲ ನಗರಸಭೆಯ ಬಜೆಟ್ ಮಂಡನೆ: ಸ್ವಚ್ಛತೆ, ಕುಡಿಯುವ ನೀರಿಗೆ ಆಧ್ಯತೆ

Update: 2018-02-07 22:00 IST

ಉಳ್ಳಾಲ, ಫೆ. 7: ನಗರಸಭೆಯ 2018-19ನೇ ಸಾಲಿನ ಬಜೆಟ್ ಮಂಡನಾ ಸಭೆ ಬುಧವಾರ ನಡೆದಿದ್ದು, ಸ್ವಚ್ಛ ಹಾಗೂ ಕುಡಿಯುವ ನೀರು ಸಮಸ್ಯೆ ಮುಕ್ತ ಉಳ್ಳಾಲ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಅಲ್ಲದೆ ಸ್ವಚ್ಛತೆ ಕಾಪಾಡುವವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ. ನಗರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹುಸೈನ್ ಕುಂಞಿಮೋನು ಪರವಾಗಿ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಬಜೆಟ್ ಮಂಡಿಸಿದರು.

ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2018ರಲ್ಲಿ ಗಾಂಧಿ ಜಯಂತಿಯಂದು ಪ್ರತೀ ವಾರ್ಡುಗಳನ್ನು ಪರಿಶಿಲೀಸಿ ಸ್ವಚ್ಛ ವಾರ್ಡ್‌ಗೆ ಪ್ರಥಮ 1ಲಕ್ಷ, ದ್ವಿತೀಯ 75 ಹಾಗೂ ತೃತೀಯ 50 ಸಾವಿರ ಬಹುಮಾನ ಘೋಷಿಸಲಾಗಿದೆ. ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಒಂದು ಸಂಘ-ಸಂಸ್ಥೆ, ಶಾಲೆ, ಕಾಲೇಜು ಮತ್ತು ಒಬ್ಬ ನಾಗರಿಕನನ್ನು ಗುರುತಿಸಿ ಪ್ರೋತ್ಸಾಹಧನದೊಂದಿಗೆ ಸನ್ಮಾನಿಸುವ ಯೋಜನೆ ರೂಪಿಸಲಾಗಿದ್ದು, ಒಟ್ಟು ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷ ಹಣ ಮೀಸಲಿಡಲಾಗಿದೆ.

ಸ್ವಚ್ಛತೆ ಕಾರ್ಯದಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಏಳು ವಾರ್ಡ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ 27 ವಾರ್ಡ್‌ಗಳಲ್ಲೂ ಕಾರ್ಯಾ ಚರಿಸಲಿದ್ದಾರೆ. ಪ್ರತೀ ಮನೆಗಳಲ್ಲೂ ಹಸಿ, ಒಣಕಸ ವಿಂಗಡಿಸುವ ನಿಟ್ಟಿನಲ್ಲಿ ತಲಾ ಎರಡು ಬಕೆಟ್‌ನಂತೆ 10,804 ಮನೆಗಳಿಗೆ ವಿತರಿಸುವ ಗುರಿ ಹೊಂದಲಾಗಿದ್ದು, ಪ್ರತೀ ಬಕೆಟ್‌ಗೆ 150 ರೂಪಾಯಿಯಂತೆ 3,24,100ರೂಪಾಯಿ ಮೀಸಲಿರಿಸಲಾಗಿದೆ. ಇದಕ್ಕಾಗಿ ಪ್ರತೀ ವಾರ್ಡ್‌ನಲ್ಲೂ 15 ಮಂದಿಯ ಸಮಿತಿ ರಚಿಸುವಂತೆ ವಾಣಿ ಆಳ್ವ ಸೂಚಿಸಿದರು. 

78 ಸಾವಿರ ವೆಚ್ಚದಲ್ಲಿ 26 ವೀಲ್ಡ್‌ಬಿನ್ ಖರೀದಿ, ಪ್ರತೀ ವಾರ್ಡ್‌ನಲ್ಲಿ ಒಣಕಸ ವಿಂಗಡನೆ ಕೇಂದ್ರಕ್ಕೆ 25 ಲಕ್ಷ, ಬೈಲಿಂಗ್ ಯಂತ್ರ ಖರೀದಿಗೆ 27.25 ಲಕ್ಷ ಅನುದಾನ ಮೀಸಲಿಡಲಾಗಿದೆ. 

ಎಲ್ಲರಿಗೂ ನೀರು ಯೋಜನೆ

ಪ್ರತೀ ವಾರ್ಡಿನಲ್ಲೂ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಅಗತ್ಯ ಕಡೆಗಳಲ್ಲಿ ತೆರೆದ ಬಾವಿ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ತೆರೆದ ಬಾವಿಗಳ ಪುನಶ್ಚೇತನ, ಪೈಪ್‌ಲೈನ್ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಗಾಗಿ 36 ಲಕ್ಷ ಅನುದಾನ ಮೀಸಲಿಡಲಾಗಿದೆ.

38.57 ಕೋಟಿ ಯೋಜನೆಯ ಬಜೆಟ್: ಸೌಂದರ್ಯಕ್ಕೆ ವಿಶೇಷ ಗಮನ

ನಗರಸಭಾ ವ್ಯಾಪ್ತಿ ಸೌಂದರ್ಯಗೊಳಿಸಲು ವಿಶೇಷ ಗಮನ ನೀಡಲಾಗಿದೆ. ಆದಾಯ ಹೆಚ್ಳ ನಿಟ್ಟಿನಲ್ಲಿ 15 ಕಡೆ ಹೋರ್ಡಿಂಗ್ಸ್ ಅಳವಡಿಕೆಗೆ ಯೋಚಿಸಲಾ ಗಿದ್ದು ಇದರಿಂದ 21.60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಸೌಂದರ್ಯದ ನಿಟ್ಟಿನಲ್ಲಿ ಮೂರು ಕಡೆ ಹೈಮಾಸ್ಟ್ ದೀಪ ಅಳವಡಿಕೆ, ದಾರಿದೀಪ ವಿಸ್ತರಣೆ, ಎಲ್‌ಇಡಿ, ಸೋಡಿಯಂ ಟ್ಯೂಬ್‌ಲೈಟ್ ಖರೀದಿಗಾಗಿ 75 ಲಕ್ಷ ಮೀಡಲಿರಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ತಗಲುವ ಖರ್ಚು ಎಸ್‌ಎಫ್‌ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿಯಿಂದ ಭರಿಸಲಾಗುತ್ತಿದೆ. ಮೂರು ಕಡೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಹಾಗೂ ಸದಸ್ಯರ ಅನುದಾನ 8ರಿಂದ 10 ಲಕ್ಷಕ್ಕೆ ಏರಿಸಲಾಗಿದೆ. 

38.57 ಕೋಟಿ ರೂ. ಬಜೆಟ್ ಇದಾಗಿದ್ದು, ನಗರಸಭೆಯ ರಾಜಸ್ವ ಆದಾಯ 9.96ಕೋಟಿ, ಖರ್ಚು-8ಕೋಟಿ, ಬಂಡವಾಳ ಆದಾಯ-0.82ಕೋಟಿ, ಬಂಡವಾಳ ಖರ್ಚು-10.80ಕೋಟಿ, ಅಸಮಾನ್ಯ ಜಮೆ-9.80ಕೋಟಿ, ಅಸಮಾನ್ಯ ಖರ್ಚು-1.59ಕೋಟಿ, ಉಳಿತಾಯ-0.18ಕೋಟಿ ಆಗಿದೆ. ಆಸ್ತಿ ತೆರಿಗೆಯಿಂದ 200ಲಕ್ಷ, ನೀರಿನ ಶುಲ್ಕ-62.31ಲಕ್ಷ, ಬಾಡಿಗೆ-37ಲಕ್ಷ, ಉದ್ದಿಮೆ ಪರವಾನಿಗೆ-21ಲಕ್ಷ, ಕಟ್ಟಡ ಪರವಾನಿಗೆ-60ಲಕ್ಷ, ಘನತ್ಯಾಜ್ಯ ಶುಲ್ಕ-37.50ಲಕ್ಷ, ಜಾಹಿರಾತು ತೆರಿಗೆ-6.50ಲಕ್ಷ, ಉಪಕರಣ ಸಂಗ್ರಹಣೆ-ದಂಡ ವಸೂಲಾತಿ-33.81ಲಕ್ಷ, ನಳ್ಳಿ ಜೋಡಣೆ-7ಲಕ್ಷ, ಖಾತೆ ಬದಲಾವಣೆ-6ಲಕ್ಷ. ಒಟ್ಟು 516.72 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. 

1.75ಕೋಟಿ ಎಸ್‌ಎಫ್‌ಸಿ ಮುಕ್ತನಿಧಿ, ವಿಶೇಷ ಅನುದಾನ-5ಕೋಟಿ, ವೇತನಾನುದಾನ-85ಲಕ್ಷ, ಬೀದಿ ದೀಪ, ನೀರು ಸರಬರಾಜು ಬಿಲ್ ಪಾವತಿಗೆ-1.85ಕೋಟಿ, ಘನತ್ಯಾಜ್ಯ ವಿಲೇವಾರಿಗೆ ವಿಶೇಷ ಅನುದಾನ-25ಲಕ್ಷ, ಸ್ವಚ್ಛ ಭಾರತ್ ಮಿಷನ್‌ನಡಿ-30ಲಕ್ಷ, ನೀರು ಸಮಸ್ಯೆ ಪರಿಹಾರಕ್ಕೆ-35ಲಕ್ಷ, ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ-5ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ-7.50ಲಕ್ಷ ಹಾಗೂ 14ನೇ ಹಣಕಾಸು ಅಯೋಗದ ಸಾಮಾನ್ಯ ಮೂಲ ಅನುದಾನ-1.78ಕೋಟಿ ಸರ್ಕಾರದಿಂದ ನಿರೀಕ್ಷಿಸಲಾಗಿದೆ. 

ಬಜೆಟ್ ಮೇಲಿನ ಚರ್ಚೆ ಸಂದರ್ಭ ನೀರು ಸರಬರಾಜು ಸಿಬ್ಬಂದಿಗೆ ಕನಿಷ್ಟ ವೇತನ ಇರುವುದರಿಂದ ಅವರು ಅಡ್ಡದಾರಿ ಹಿಡಿಯುತ್ತಿದ್ದಾರೆ, ಈ ನಿಟ್ಟಿನಲಿ ವೇತನ ಹೆಚ್ಚಳ ಮಾಡಬೇಕು. ಅಲ್ಲದೆ ನಗರಸಭಾ ವ್ಯಾಪ್ತಿಯಲ್ಲಿ ಮನೆ, ಕಟ್ಟಡ ನಿರ್ಮಾಣ ಸಂದರ್ಭ ಅಂಗಳಕ್ಕೆ ಇಂಟರ್‌ಲಾಕ್ ಅಥವಾ ಕಾಂಕ್ರೀಟ್ ಅಳವಡಿಕೆಗೆ ಅವಕಾಶ ನೀಡಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ನೀರಿಂಗಿಸುವಿಕೆಗೂ ಅಡ್ಡಿಯಾಗುತ್ತಿದೆ. ಅದರ ಬದಲು ಕೆಂಪು ಕಲ್ಲು ಹಾಸಲು ಅವಕಾಶ ನೀಡಬಹುದು ಎಂದು ಸದಸ್ಯ ಫಾರೂಕ್ ಉಳ್ಳಾಲ್ ಮಾಡಿದ ಮನವಿಯನ್ನು ದಾಖಲಿಸಲಾಯಿತು.

ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಕಲಾ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News