ನಿರ್ಣಾಯಕ ಯುದ್ಧ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುಪಡೆಯುವ: ಕೇಂದ್ರ ಸಚಿವ ಅಠಾವಳೆ

Update: 2018-02-07 17:08 GMT

ಹೊಸದಿಲ್ಲಿ, ಫೆ.7: ಪಾಕಿಸ್ತಾನದ ಕಡೆಯಿಂದ ಪದೇಪದೇ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದಕ್ಕೆ ಶಾಶ್ವತ ಪರಿಹಾರವನ್ನು ಸೂಚಿಸಿರುವ ಕೇಂದ್ರ ಸಚಿವ ಮತ್ತು ದಲಿತ ನಾಯಕ ರಾಮದಾಸ್ ಅಠವಳೆ, ಪಾಕಿಸ್ತಾನದೊಂದಿಗೆ ನಿರ್ಣಾಯಕ ಯುದ್ಧ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುಪಡೆಯಬೇಕೆಂಬ ಸಲಹೆಯನ್ನು ನೀಡಿದ್ದಾರೆ.

ಪಾಕಿಸ್ತಾನವು ಪದೇಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತದೆ. ನಾವು ಅದೆಷ್ಟು ಬಾರಿ ಅದರತ್ತ ಸ್ನೇಹಹಸ್ತ ಚಾಚಿದರೂ ಅದಕ್ಕೆ ಬುದ್ಧಿಬಂದಿಲ್ಲ. ಹಾಗಾಗಿ ಪಾಕಿಸ್ತಾನದ ಜೊತೆ ನಿರ್ಣಾಯಕ ಯುದ್ಧವನ್ನು ನಡೆಸುವ ಸಮಯ ಬಂದಿದೆ. ಆ ದೇಶಕ್ಕೆ ಪಾಠವನ್ನು ಕಲಿಸುವ ಅಗತ್ಯವಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಠಾವಳೆ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ವೇಳೆ ಅಠಾವಳೆಯವರು ಪಾಕಿಸ್ತಾನದ ಜೊತೆ ಯುದ್ಧಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಳನ್ನು ಉಲ್ಲೇಖಿಸಿದರು.

ಭಾರತವು ಹುಲಿಯಾದರೆ ಪಾಕಿಸ್ತಾನವು ನಮ್ಮ ಮುಂದೆ ತುಂಬಾ ಚಿಕ್ಕದು. ನಮ್ಮ ಸ್ನೇಹದ ಪ್ರಸ್ತಾವನೆಯನ್ನು ನೀವು ಸ್ವೀಕರಿಸದಿದ್ದರೆ ಯುದ್ಧಕ್ಕೆ ಸಿದ್ಧರಾಗಿ ಎಂಬ ವಾಜಪೇಯಿಯವರ ಮಾತಿನಿಂದ ನಾವು ಕಲಿಯಬೇಕು ಎಂದು ಮಹಾರಾಷ್ಟ್ರ ಮೂಲದ ನಾಯಕರಾದ ಅಠಾವಳೆ ತಿಳಿಸಿದ್ದಾರೆ. ನಾವು ಮಾಡುವ ದಾಳಿ ಎಷ್ಟು ತೀವ್ರವಾಗಿರಬೇಕೆಂದರೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಮಾತ್ರವಲ್ಲ, ಪಾಕಿಸ್ತಾನದ ಕೆಲವು ಭಾಗಗಳನ್ನೂ ವಶಪಡಿಸಿಕೊಳ್ಳಬೇಕು ಎಂದು ದಲಿತ ನಾಯಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News