ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿದ ಪಾಕ್

Update: 2018-02-07 17:23 GMT

ವಿಶ್ವಸಂಸ್ಥೆ, ಫೆ. 7: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಗಳವಾರ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ ಪಾಕಿಸ್ತಾನ, ವಿಶ್ವಸಂಸ್ಥೆಯು ಆಯ್ದ ನಿರ್ಣಯಗಳನ್ನು ಮಾತ್ರ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದೆ.

‘‘ವಿಶ್ವಸಂಸ್ಥೆಯು ತನ್ನ ಆಯ್ದ ನಿರ್ಣಯಗಳನ್ನು ಮಾತ್ರ ಜಾರಿಗೊಳಿಸುತ್ತಿದೆ. ಅದರ ವಿಶ್ವಾಸಾರ್ಹತೆಗೆ ಇದಕ್ಕಿಂತ ಹೆಚ್ಚಿನ ಹಾನಿ ಬೇರೆ ಯಾವುದರಿಂದಲೂ ಆಗಲು ಸಾಧ್ಯವಿಲ್ಲ’’ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ಖಾಯಂ ರಾಯಭಾರಿ ಮಲೀಹಾ ಲೋಧಿ ಹೇಳಿದರು.

‘‘ಆದುದರಿಂದ ಮಂಡಳಿಯು ತನ್ನ ನಿರ್ಣಯಗಳ, ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದ ಮುಂತಾದ ದೀರ್ಘಕಾಲೀನ ವಿವಾದಗಳಿಗೆ ಸಂಬಂಧಿಸಿ ನಿರ್ಣಯಗಳ ಜಾರಿಯನ್ನು ಆಗಾಗ್ಗೆ ಪರಿಶೀಲಿಸಬೇಕು’’ ಎಂದು ಅವರು ನುಡಿದರು.

‘‘ತನ್ನದೇ ನಿರ್ಣಯಗಳನ್ನು ಜಾರಿಗೊಳಿಸಲು ವಿಶ್ವಸಂಸ್ಥೆ ವಿಫಲವಾದರೆ, ಜಗತ್ತಿನಲ್ಲಿ ಭದ್ರತಾ ಮಂಡಳಿಯದ್ದು ಮಾತ್ರವಲ್ಲ, ವಿಶ್ವಸಂಸ್ಥೆಯ ಸ್ಥಾನವೇ ದುರ್ಬಲಗೊಳ್ಳುತ್ತದೆ’’ ಎಂದರು.

ಅವರು 1948ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ನಿರ್ಣಯದ ಬಗ್ಗೆ ಮಾತನಾಡುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಲು ಜನಮತಗಣನೆ ನಡೆಯಬೇಕು ಎಂಬುದಾಗಿ ಆ ನಿರ್ಣಯವು ಕರೆ ನೀಡಿತ್ತು. ಅದೇ ವೇಳೆ, ರಾಜ್ಯಕ್ಕೆ ನುಗ್ಗಿದ ಪಾಕಿಸ್ತಾನದ ‘ಬುಡಕಟ್ಟು’ ಜನರು ಹಿಂದೆಹೋಗಬೇಕೆಂದೂ ಅದು ಹೇಳಿತ್ತು.

ಈ ಬುಡಕಟ್ಟು ಜನರು ಪಾಕಿಸ್ತಾನಿ ಸೈನಿಕರು ಹಾಗೂ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದಕ್ಕಾಗಿ ಅವರು ಕಾಶ್ಮೀರಕ್ಕೆ ನುಗ್ಗಿದ್ದಾರೆ ಎಂಬುದಾಗಿ ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News