×
Ad

ಸುರತ್ಕಲ್ ಕಾನ ಜಂಕ್ಷನ್‌ನಲ್ಲಿ ಡಿವೈಎಫ್‌ಐ ವತಿಯಿಂದ ರಸ್ತೆ ತಡೆ

Update: 2018-02-08 16:32 IST

ಮಂಗಳೂರು, ಫೆ.8: ಗುಂಡಿಮಯವಾಗಿರುವ ಸುರತ್ಕಲ್ ಸಮೀಪದ ಕಾನ ಪ್ರದೇಶದಿಂದ ಜೋಕಟ್ಟೆಯನ್ನು ಸಂಪರ್ಕಿಸುವ ಎಸ್‌ಇಝೆಡ್ ಕಾರಿಡಾರ್ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕಾನ ಜಂಕ್ಷನ್‌ನಲ್ಲಿ ಡಿವೈಎಫ್‌ಐ ಸುರತ್ಕಲ್, ಜೋಕಟ್ಟೆ ಘಟಕಗಳ ವತಿಯಿಂದ ಗುರುವಾರ ರಸ್ತೆ ತಡೆ ನಡೆಸಲಾಯಿತು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಎಸ್‌ಇಝೆಡ್, ಎಂಆರ್‌ಪಿಎಲ್ ಮುಂತಾದ ಕೈಗಾರಿಕೆಗಳಿಂದ ಊರು ಅಭಿವೃದ್ಧಿಗೊಳ್ಳುತ್ತವೆ, ಯುವಜನರಿಗೆ ಉದ್ಯೋಗ ದೊರಕುತ್ತವೆ ಎಂಬ ಭ್ರಮೆಯನ್ನು ಹುಟ್ಟು ಹಾಕಲಾಗಿತ್ತು. ಆದರೆ ಎಂಆರ್‌ಪಿಎಲ್‌ನಿಂದಾಗಿ ಊರು ನರಕವಾಗಿದೆ. ಯುವ ಜನರಿಗೆ ಉದ್ಯೋಗದ ಭರವಸೆ ಸುಳ್ಳಾಗಿದೆ. ಅಭಿವೃದ್ದಿಯ ಬದಲಿಗೆ ಪರಿಸರ ಮಲಿನಗೊಂಡು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಸಾರ್ವಜನಿಕ ರಸ್ತೆಗಳು ಕೈಗಾರಿಕಾ ಕಂಪನಿಗಳ ದೈತ್ಯ ವಾಹನಗಳ ಓಡಾಟದಿಂದ ಪೂರ್ಣವಾಗಿ ಹದಗೆಟ್ಟಿದೆ ಎಂದು ಆಪಾದಿಸಿದರು.

ವರ್ಷಕ್ಕೆ ಸಾವಿರಾರು ಕೋಟಿ ಲಾಭಗಳಿಸುವ ಎಂಆರ್‌ಪಿಎಲ್, ಎಸ್‌ಇಝೆಡ್‌ಗಳು ಕನಿಷ್ಟ ತಾವು ಬಳಸುತ್ತಿರುವ ರಸ್ತೆಗಳ ದುರಸ್ತಿಗೂ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕೈಗಾರಿಕಾ ಘಟಕಗಳ ಸುತ್ತಲಿನ ಗ್ರಾಮಗಳ ಜನರ ಬದುಕು ನರಕಸದೃಶವಾಗಿದೆ. ಇಂತಹ ದುಸ್ಥಿತಿಗೆ ಕಾರಣವಾಗಿರುವ ಬೃಹತ್ ಕೈಗಾರಿಕೆಗಳನ್ನು ಹದ್ದುಬಸ್ತಿನಲ್ಲಿಡಬೇಕಾದ ಜನಪ್ರತಿನಿಧಿಗಳು ಮೌನ ವಹಿಸಿರುವುದರಿಂದ ಕಂಪನಿಗಳಿಗೆ ಕಡಿವಾಣ ಇಲ್ಲದಂತ ಸ್ಥಿತಿ ನಿರ್ಮಿಸಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಎಸ್‌ಇಝೆಡ್ ಮತ್ತು ಎಂಆರ್‌ಪಿಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ರಸ್ತೆ ದುರಸ್ಥಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಕಾರರು ರಸ್ತೆ ತಡೆ ಕೈಬಿಟ್ಟರು. 

ರಸ್ತೆ ತಡೆಯ ನೇತೃತ್ವವನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸ್ಥಳೀಯ ಸಮಿತಿಯ ಪ್ರಮುಖರಾದ ಶ್ರೀನಾಥ್ ಕುಲಾಲ್, ಶ್ರೀನಿವಾಸ ಹೊಸಬೆಟ್ಟು, ಮಕ್ಸೂದ್, ಸಲೀಂ ಶ್ಯಾಡೊ, ಅಜ್ಮಲ್ ಕಾನ, ಆಬೂಬಕರ್ ಬಾವಾ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಸಿಲ್ವಿಯಾ ಜೋಕಟ್ಟೆ, ರಹೀಂ ಕಾನ, ಬೆನೆಟ್ ಡಿಸೋಜ, ರಾಜು ಜೋಕಟ್ಟೆ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News