ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾದ ಮಾಜಿ ಪ್ರಧಾನಿ ಖಾಲಿದಾ ಝಿಯಾರಿಗೆ 5 ವರ್ಷ ಜೈಲು

Update: 2018-02-08 16:19 GMT

ಢಾಕಾ,ಫೆ.8: ಜಿಯಾ ಅನಾಥಾಶ್ರಮ ಟ್ರಸ್ಟ್‌ಗೆ ಮೀಸಲಾಗಿದ್ದ 21 ಮಿಲಿಯನ್ ಟಾಕಾ(252,000 ಡಾ.)ಗಳನ್ನು ದುರುಪಯೋಗಿಸಿಕೊಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಪ್ರತಿಪಕ್ಷ ಬಿಎನ್‌ಪಿಯ ಮುಖ್ಯಸ್ಥೆ ಖಾಲಿದಾ ಜಿಯಾ(72) ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಗುರುವಾರ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಇದೇ ಪ್ರಕರಣದಲ್ಲಿ ಖಾಲಿದಾರ ಪುತ್ರ ತಾರಿಖ್ ರಹಮಾನ್ ಮತ್ತು ಇತರ ನಾಲ್ವರಿಗೆ ಹತ್ತು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ.

ತನ್ನ ವಿರುದ್ಧ ಆರೋಪವನ್ನು ಹೊರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ದಾಖಲಿಸಲು ಅನುಮತಿ ಕೋರಿ ಖಾಲಿದಾ ಸಲ್ಲಿಸಿದ್ದ ಎರಡನೇ ಅರ್ಜಿಯನ್ನೂ ಸರ್ವೋಚ್ಚ ನ್ಯಾಯಾಲಯವು 2014,ನ.30ರಂದು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುವಂತೆ ಸೂಚಿಸುವುದರೊಂದಿಗೆ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಿಂದ ಪಾರಾಗುವ ಅವರ ಕೊನೆಯ ಪ್ರಯತ್ನವು ವಿಫಲಗೊಂಡಿತ್ತು. ಅದಕ್ಕೂ ಮುನ್ನ 2014,ಮಾ.19ರಂದು ಖಾಲಿದಾ ವಿರುದ್ಧ ಭ್ರಷ್ಟಾಷಾರ ಆರೋಪಗಳನ್ನು ರೂಪಿಸಿದ್ದ ವಿಚಾರಣಾ ನ್ಯಾಯಾಲಯದಲ್ಲಿ ಅವರ ವಿಚಾರಣೆಗೆ ಉಚ್ಚ ನ್ಯಾಯಾಲಯವು ಹಸಿರು ನಿಶಾನೆ ತೋರಿಸಿತ್ತು. ಭ್ರಷ್ಟಾಚಾರ ನಿಗ್ರಹ ಆಯೋಗ(ಎಸಿಸಿ)ವು ಖಾಲಿದಾ ವಿರುದ್ಧ ಎರಡು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿತ್ತು.

ಜಿಯಾ ಅನಾಥಾಶ್ರಮ ಟ್ರಸ್ಟ್ ಮತ್ತು ಜಿಯಾ ಚಾರಿಟೇಬಲ್ ಟ್ರಸ್ಟ್ ಕೇವಲ ದಾಖಲೆಗಳಲ್ಲಿರುವ ದತ್ತಿಸಂಸ್ಥೆಗಳಾಗಿವೆ ಮತ್ತು ಖಾಲಿದಾ 2001-2006ರ ಅವಧಿಯಲ್ಲಿ ಬಿಎನ್‌ಪಿ ಸರಕಾರದ ಪ್ರಧಾನಿಯಾಗಿದ್ದಾಗ ಈ ಸಂಸ್ಥೆಗಳ ಹೆಸರಿನಲ್ಲಿ ಭಾರೀ ಹಣವನ್ನು ಕೊಳ್ಳೆ ಹೊಡೆಯಲಾಗಿತ್ತು ಎಂದು ಎಸಿಸಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News