×
Ad

ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಮೇಯರ್ ಅಶ್ರಫ್ ರಾಜೀನಾಮೆ

Update: 2018-02-08 17:41 IST

ಮಂಗಳೂರು, ಫೆ.8: ಮಾಜಿ ಮೇಯರ್ ಕೆ. ಅಶ್ರಫ್ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಅವರು ಕಾಂಗ್ರೆಸ್ ಪಕ್ಷ ತ್ಯಜಿಸುವ ಮುನ್ಸೂಚನೆ ನೀಡಿದ್ದು, ಶೀಘ್ರ ಜಾತ್ಯತೀತ ಜನತಾ ದಳಕ್ಕೆ ಸೇರ್ಪೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ ಅಶ್ರಫ್ ಬಂದರ್ ವಾರ್ಡ್‌ನಿಂದ ಸ್ಪರ್ಧಿಸಿದ್ದರಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯ ಕಟ್ಟಾ ಬೆಂಬಲಿಗರಾಗಿದ್ದ ಅಶ್ರಫ್ ಬಳಿಕ ಪೂಜಾರಿ ವಿರುದ್ಧ ಅಸಮಾಧಾನ ಹೊರಗೆಡಹಿ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಸರಿದಿದ್ದರು. ಅಲ್ಲದೆ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಬದಲಾದ ರಾಜಕೀಯ ವಿದ್ಯಮಾನದಂತೆ ಮರಳಿ ಕಾಂಗ್ರೆಸ್ ಸೇರಿದ್ದ ಅಶ್ರಫ್‌ರಿಗೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಸ್ಥಾನ ಲಭಿಸಿತ್ತು. ಈ ಮಧ್ಯೆ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದ್ದರೂ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಕ್ಷದ ನಾಯಕರ ವಿರುದ್ಧ ಕಿಡಿಕಾರುತ್ತಿದ್ದರು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗುವುದರೊಂದಿಗೆ ಅಶ್ರಫ್ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಸೇರ್ಪೆಗೊಳಿಸು ಮುನ್ಸೂಚನೆ ನೀಡಿದ್ದರು. ಅದರಂತೆ ಗುರುವಾರ ಕೆಪಿಸಿಸಿ ಅಲ್ಪಸಂಖ್ಯಾತರ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅಶ್ರಫ್ ‘ಈಗ ಪಕ್ಷದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಶೀಘ್ರ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿ ಜೆಡಿಎಸ್ ಸೇರ್ಪಡೆಗೊಳ್ಳುವೆ. ಮುಂದಿನ ಚುನಾವಣೆಯಲ್ಲಿ ಮಂಗಳೂರು ನಗರ ದಕ್ಷಿಣ ಅಥವಾ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಛೆ ಇದೆ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News