×
Ad

ಮನಪಾ ವ್ಯಾಪ್ತಿಗೆ ಮುಲ್ಕಿ-ಬಜ್ಪೆ ಸೇರ್ಪಡೆ ಇಲ್ಲ: ಸಚಿವ ರೋಷನ್ ಬೇಗ್

Update: 2018-02-08 18:07 IST

ಮಂಗಳೂರು, ಫೆ.8: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಮುಲ್ಕಿ ಮತ್ತು ಬಜ್ಪೆ ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಹೇಳಿದರು.

ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ರೋಶನ್ ಬೇಗ್ ಮಂಗಳೂರು ಮನಪಾ ವ್ಯಾಪ್ತಿಯನ್ನು ವಿಸ್ತರಿಸಿ ಮುಲ್ಕಿ ಮತ್ತು ಬಜ್ಪೆ ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಸೂಕ್ತ ಪ್ರಸ್ತಾವನೆ ಸ್ವೀಕೃತವಾದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು. 2011ರ ಜನಗಣತಿಯ ಅನುಸಾರ ಮನಪಾ ಜನಸಂಖ್ಯೆ 4.88.968 ಆಗಿರುತ್ತದೆ ಎಂದರು.

ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 169 ಅನಧಿಕೃತ ಕಟ್ಟಡಗಳಿವೆ. ಆ ಪೈಕಿ 25 ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲಿ ಪಾರ್ಕಿಂಗ್ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಲಾಗಿದೆ. ಇದನ್ನು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 321(3)ರನ್ವಯ ತೆರವುಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ರೋಷನ್ ಬೇಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News