ಆರೋಪಿಯನ್ನು ಬಂಧಿಸುವಂತೆ ವಿಹಿಂಪ, ಬಜರಂಗದಳ ಒತ್ತಾಯ
ಮಂಗಳೂರು, ಫೆ. 8: ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ 8ನೆ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ರಿಜೀಶ್‌ನನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪುತ್ತೂರು ವಿಭಾಗ ಒತ್ತಾಯಿಸಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಅವರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 8ನೆ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿಯನ್ನು ಪೊಲೀಸರು ಬಂಧಿಸದೆ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ಜ.31ರಂದು ವಿದ್ಯಾರ್ಥಿನಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಟೋ ರಿಕ್ಷಾದಲ್ಲಿ ಬಂದ ರಿಜೀಶ್ ಎಂಬಾತ ಧರ್ಮಸ್ಥಳ-ಮುಂಡಾಜೆ ರಸ್ತೆಯ ಕೊಲೆಂಜಿರೋಡಿಯಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬೈಕ್ ಸವಾರರೊಬ್ಬರು ನೋಡಿದ ಕೂಡಲೇ ರಿಜೀಶ್ ಪರಾರಿಯಾಗಿದ್ದಾನೆ. ಈ ಬಗ್ಗೆ ಬಾಲಕಿ ತನ್ನ ಹೆತ್ತವರಲ್ಲಿ ಹೇಳಿಕೊಂಡಿದ್ದಾಳೆ ಎಂದರು.
ಘಟನೆಗೆ ಸಂಬಂಧಿಸಿ ದೂರು ನೀಡಲು ಹೋದಾಗ ಸಂಬಂಧಪಟ್ಟ ಠಾಣೆ ಎಸ್‌ಐ ಸುಮಾರು ಎರಡು ತಾಸುಗಳ ಕಾಲ ಕಾಯಿಸಿದ್ದಾರೆ. ಘಟನೆಯಲ್ಲಿ ರಿಕ್ಷಾ ಚಾಲಕನನ್ನು ಬಂಧಿಸಿದ್ದರೂ ನಿಜವಾದ ಆರೋಪಿ ರಿಜೀಶ್‌ನನ್ನು ಪೊಲೀಸರು ಬಂಧಿಸದೆ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭಾಸ್ಕರ ಧರ್ಮಸ್ಥಳ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ ಮತ್ತು ಬಾಲಕಿಯ ತಂದೆ, ತಾಯಿ ಉಪಸ್ಥಿತರಿದ್ದರು.