×
Ad

ಭೂ ಅತಿಕ್ರಮಣ ಆರೋಪ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲು

Update: 2018-02-08 19:43 IST

ಪಟ್ನಾ, ಫೆ.8: ಇಲ್ಲಿನ ದನಪುರ್ ಎಂಬ ಪ್ರದೇಶದಲ್ಲಿ ಭೂಅತಿಕ್ರಮಣ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಂಗ್ ಜೊತೆಗೆ ಈ ಪ್ರಕರಣದಲ್ಲಿ ಇತರ 32 ಮಂದಿಯ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ.

ಎರಡು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಬಿಹಾರ ಮೂಲದ ಬಿಜೆಪಿ ಸಂಸದ ಮತ್ತು ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಗಿರಿರಾಜ್ ಸಿಂಗ್ ವಿರುದ್ಧ ಪಟ್ನಾ ಸಿವಿಲ್ ನ್ಯಾಯಾಲಯದ ನಿರ್ದೇಶನದಂತೆ ದನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ತನ್ನ ಎರಡು ಎಕರೆ ಜಮೀನನ್ನು ಪಡೆಯಲು ಮೂವತ್ತಮೂರು ಮಂದಿ ಹುನ್ನಾರ ನಡೆಸಿದ್ದಾರೆ ಎಂದು ದನಪುರದ ಅಸೊಪುರ್ ಗ್ರಾಮದ ರಾಮನಾರಾಯಣ ಪ್ರಸಾದ್ ಎಂಬವರು ಎಸ್ಸಿ/ಎಸ್ಟಿ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ದನಪುರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಿರಿರಾಜ್ ಸಿಂಗ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್, ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅಥವಾ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಈಗ ಸಿಂಗ್ ರಾಜೀನಾಮೆಯನ್ನು ಕೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News