ಮಂಗಳೂರು: ಲಂಚ ಸ್ವೀಕರಿಸಿದ್ದ ಜೈಲರ್‌ಗೆ ಶಿಕ್ಷೆ
ಮಂಗಳೂರು, ಫೆ. 8: ಅಸೌಖ್ಯದಿಂದ ಬಳಲುತ್ತಿದ್ದ ಕೈದಿಯೋರ್ವನನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಪ್ರಮೋದ್ ಆಳ್ವ ಎಂಬವರಿಂದ ಲಂಚ ಪಡೆಯುತ್ತಿರುವಾಗ ಲೊಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಜೈಲರ್‌ಗೆ 1 ವರ್ಷ ಸಾದಾ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರು ಕಾರಾಗೃಹದಲ್ಲಿ ಉಪಾಧೀಕ್ಷಕರಾಗಿದ್ದ ಜೈಲರ್ ಕೆ.ಬಿ.ತಿಪ್ಪಾ ನಾಯ್ಕ ಶಿಕ್ಷೆಗೊಳಗಾದ ಅಪರಾಧಿ. ಅವರು ಪ್ರಸ್ತುತ ನಿವೃತ್ತರಾಗಿದ್ದಾರೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಮುರಳಿಧರ ಪೈ ಅವರು ಈ ಶಿಕ್ಷೆ ಪ್ರಕಟಿಸಿದ್ದಾರೆ.
ಕೆ.ಬಿ.ತಿಪ್ಪಾ ನಾಯ್ಕ ಅವರನ್ನು 2011 ಜ. 3ರಂದು 1 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಆಗಿನ ಲೋಕಾಯುಕ್ತ ಇನ್‌ಸ್ಪೆಕ್ಟರ್ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ಬಂಧಿಸಲಾಗಿತ್ತು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು. ಕಳೆದ ಏಳು ತಿಂಗಳಲ್ಲಿ ಒಟ್ಟು 12 ಲೋಕಾಯುಕ್ತ ಪ್ರಕರಣಗಳಲ್ಲಿ 10 ಮಂದಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.