ಉಡುಪಿ: ಮತದಾರರ ಜಾಗೃತಿ ಆರಂಭಿಸಲು ಸಿಇಒ ಸೂಚನೆ
ಉಡುಪಿ, ಫೆ.8: ಮತದಾನದ ಮಹತ್ವವನ್ನು ತಿಳಿಸಿ ಪ್ರಜಾಪ್ರಭುತ್ವವನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಜನರಲ್ಲಿ ಮಾಹಿತಿ ತುಂಬುವುದು ಸ್ವೀಪ್ (ಎಸ್‌ವಿಇಇಪಿ- ವ್ಯವಸ್ಥಿತ ಮತದಾರರಿಗೆ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ) ಸಮಿತಿಯ ಉದ್ದೇಶ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ಪ್ರೌಢಶಾಲೆ, ಪಿಯುಸಿ ಮತ್ತು ಕಾಲೇಜು ಗಳಲ್ಲಿರುವ ಇಲೆಕ್ಟ್ರೋ ಲಿಟರಸಿ ಕ್ಲಬ್‌ಗಳಿಗೆ ಜೀವ ತುಂಬಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಶಾಲಾ ಕಾಲೇಜು ಗಳಲ್ಲಿರುವ ಈ ಕ್ಲಬ್‌ಗಳು ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುತ್ತವೆ. ಚುನಾವಣಾ ದಿನಗಳಲ್ಲಿ ಇವರ ಮೂಲಕ ಮತದಾನದ ಜಾಗೃತಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳೇಕು ಎಂದು ಸಿಇಒ ಸಲಹೆ ನೀಡಿದರು.
ಕಾರ್ಕಳ, ಕುಂದಾಪುರದ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸ್ವೀಪ್ ಸಂಬಂಧ ರೂಪಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರೋಶನ್ ಕುಮಾರ್ ಶೆಟ್ಟಿ ತಾವು ಆಯೋಜಿಸಲಿರುವ ಕಾರ್ಯಕ್ರಮಗಳ ಪಟ್ಟಿ ನೀಡಿದರು.
ಮತದಾನದ ಹಕ್ಕನ್ನು ಸಾರಿ ಹೇಳಲು ಬಹುಮಾಧ್ಯಮಗಳ ಸದ್ಬಳಕೆ ಹಾಗೂ ಈ ಸಂಬಂಧ ಮಾಹಿತಿಯನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು, ಕಾರ್ಕಳ ಮುಖ್ಯಾಧಿಕಾರಿ ಮೇಬಲ್, ಕುಂದಾಪುರ ಮುಖ್ಯಾಧಿ ಕಾರಿ ಗೋಪಾಲಕೃಷ್ಣ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಹರೀಶ್ ಗಾಂವ್ಕರ್, ಜಂಟಿ ನಿರ್ದೇಶಕ ಕೈಗಾರಿಕ ಇಲಾಖೆ ರಮಾನಂದ ನಾಯಕ್, ಡಿಎಚ್‌ಒ ಡಾ.ರೋಹಿಣಿ, ಡಿಡಿಪಿಐ ಶೇಷಶಯನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಕಾರ್ಮಿಕ ಇಲಾಖೆ ಅಧಿಕಾರಿ ವಿಶ್ವನಾಥ ಉಪಸ್ಥಿತರಿದ್ದರು.