ವಾರ್ಡ್ ಸಭೆಯಲ್ಲಿ ನೀಡಿದ ಭರವಸೆ ಈಡೇರಿಕೆ: ಪ್ರಮೋದ್
ಉಡುಪಿ, ಫೆ. 8: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ನಡೆಸಿದ ವಾರ್ಡ್ ಮಟ್ಟದ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು ಹಾಗೂ ನೀಡಿದ ಭರವಸೆಗಳನ್ನು ಈಡೇರಿಸಲಾ ಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬುಧವಾರ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾರ್ಯಕ್ರಮ ಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರಸಭಾ ವ್ಯಾಪ್ತಿಯ ಪ್ರತಿಯೊಂಡು ವಾರ್ಡ್‌ನಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ, ಅಲ್ಲಿ ನಾಗರಿಕರು ಸಲ್ಲಿಸಿದ ಅಹವಾಲುಗಳಿಗೆ ಅನುಗುಣ ವಾಗಿ, ಅಗತ್ಯವಿರುವ ಕಾಮಗಾರಿ ನಡೆಸಲು ಅಗತ್ಯವಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಗರಸಭೆಗೆ 10 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿಸಲಾಗಿದೆ. ಈ ವಿಶೇಷ ಅನುದಾನದಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾದ ಎಲ್ಲಾ ಕಾಮಗಾರಿಗಳನ್ನು ನಡೆಸಲಾಗುವುದೆಂದು ಸಚಿವರು ಹೇಳಿದರು.
ಚಿಟ್ಪಾಡಿ ವಾರ್ಡ್‌ನಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಮಳೆ ನೀರು ಹರಿಯುವ ಚರಂಡಿಗೆ ತಡೆಗೋಡೆ ನಿರ್ಮಾಣ ಮಾಡಲು ಶಿಲನ್ಯಾಸ ನೆರವೇರಿಸಿದ ಸಚಿವರು, ನಂತರ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು, ಈ ಸಂದರ್ಭ ದಲ್ಲಿ ಅಂಗವಿಕಲತೆಯಿಂದ ಹಾಸಿಗೆ ಹಿಡಿದಿರುವ ಇಬ್ಬರು ಮಕ್ಕಳ ಕುಟುಂಬದ ಸಮಸ್ಯೆ ಆಲಿಸಿದ ಸಚಿವರು, ಅವರ ಕುಟುಂಬಕ್ಕೆ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ನಿವೇಶನಗಳಲ್ಲಿ ಒಂದನ್ನು ನೀಡುವಂತೆ ಹಾಗೂ ಮನೆ ನಿರ್ಮಾಣಕ್ಕೆ 2.70 ಲಕ್ಷ ರೂ ಗಳ ಅನುದಾನವನ್ನು ಶೀಘ್ರದಲ್ಲಿ ಒದಗಿಸಿ, ಈ ಕುರಿತು ವರದಿ ತಮಗೆ ನೀಡುವಂತೆ ಪೌರಾಯುಕ್ತರಿಗೆ ಸಚಿವರು ಸೂಚಿಸಿದರು.
ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯವಿರುವೆಡೆಗಳಲ್ಲಿ ಡಾಮರೀಕರಣದ ಬದಲು ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಸೂಚಿಸಿದ ಸಚಿವರು,ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸಿ ಜನರಿಗೆ ಅನುಕೂಲ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರು ವಿವಿಧ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮಗಳಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ , ಚಿಟ್ಪಾಡಿ ವಾರ್ಡ್ ಸದಸ್ಯ ನವೀನ್ ಭಂಡಾರಿ, ಬಡಗಬೆಟ್ಟು ವಾರ್ಡ್ ಸದಸ್ಯ ವಿಜಯ ಪೂಜಾರಿ, ಬೈಲೂರು ವಾರ್ಡ್ ಸದಸ್ಯ ರಮೇಶ್ ಕಾಂಚನ್, ಒಳಕಾಡು ವಾರ್ಡ್ ಸದಸ್ಯೆ ಗೀತಾ ರವಿಶೇಟ್, ಕುಂಜಿಬೆಟ್ಟು ವಾರ್ಡ್ ಸದಸ್ಯ ಶಶಿಕಾಂತ್ ಕುಂದರ್, ಇಂದಿರಾನಗರ ವಾರ್ಡ್ ಸದಸ್ಯೆ ಹೇಮಲತಾ ಹಿಲರಿ ನೊರೋನ್ಹಾ , ಕಸ್ತೂರ್ಬಾನಗರ ವಾರ್ಡ್ ಸದಸ್ಯ ಶಾಂತಾರಾಂ ಸಾಲ್ವಣ್‌ಕರ್ , ಪೌರಾಯುಕ್ತ ಮಂಜುನಾಥಯ್ಯ, ನಗರಸಭೆಯ ಸಹಾಯಕ ಇಂಜಿನಿಯರ್ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.