×
Ad

ಉಡುಪಿ: ಅಪಘಾತ ಜೀವ ರಕ್ಷಕ ತರಬೇತಿ ಕಾರ್ಯಾಗಾರ

Update: 2018-02-08 20:31 IST

ಉಡುಪಿ, ಫೆ.8: ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ ಮೊದಲು ಆಸ್ಪತ್ರೆಗೆ ದಾಖಲಿಸಬೇಕು, ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಉಡುಪಿ ಮತ್ತು ಮಂಗಳೂರು ವಿಭಾಗದ ಕಾರ್ಮಿಕ ಸಹಾಯಕ ಆಯುಕ್ತ ಕೆ.ಬಿ ನಾಗರಾಜ ಹೇಳಿದ್ದಾರೆ.

ಗುರುವಾರ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಇವುಗಳ ಸಹಯೋಗದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಹಮ್ಮಿಕೊಂಡ ಅಪಘಾತ ಜೀವ ರಕ್ಷಕ ತರಬೇತಿ ಕಾರ್ಯಾಗಾರ (ಪ್ರಥಮ ಚಿಕಿತ್ಸೆ)ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಸಂಘಟಿತ ಕಾರ್ಮಿಕರು ಈ ದೇಶದಲ್ಲಿ ಶೇ.92ರಷ್ಟಿದ್ದಾರೆ. ಉಳಿದಂತೆ ಶೇ.8 ಮಂದಿ ಮಾತ್ರ ಸಂಘಟಿತ ಕಾರ್ಮಿಕರು. ಕೇಂದ್ರ ಸರಕಾರ ಕಾರ್ಮಿಕರ ಸಮಸ್ಯೆಗಳನ್ನು ಅರಿತು ಸಾಮಾಜಿಕ ಭದ್ರತೆ ಕಾಯಿದೆಯನ್ನು ಜಾರಿಗೆ ತಂದಿದ್ದು, ಈ ಕಾಯಿದೆಯಡಿಯಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಊರ್ಜಿತವಾಗಿ ನೋಂದಾಯಿಸಲ್ಪಟ್ಟ ಯಾವುದೇ ವಾಹನ ಚಾಲಕರು, ಕ್ಲೀನರ್, ವಾಹನ ನಿರ್ವಾಹಕರು, ಕರ್ನಾಟಕ ಖಾಸಗಿ ವಾಣಿಜ್ಯ ಕಾರ್ಮಿಕರ ವಿಮಾ ಯೋಜನೆಗೆ ಅರ್ಹರಾಗುತ್ತಾರೆ. ಆದ್ದರಿಂದ ಸರ್ವೋಚ್ಚ ನ್ಯಾಯಾಯ ಮಹತ್ವದ ತೀರ್ಪಿನಲ್ಲಿ ತಿಳಿಸಿದಂತೆ, ಅಪಘಾತದಲ್ಲಿ ಸಿಲುಕಿದಾಗ ಪೂರ್ವಾಪರ ಯೋಚಿಸದೇ ಮೊದಲು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಶಾಖೆಯ ಭಾರತೀಯ ರೆಡ್‌ಕ್ರಾಸ್‌ನ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಉಡುಪಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್, ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಎಸ್.ಎಸ್, 2ನೇ ವೃತ್ತ ಕಾರ್ಮಿಕ ನಿರೀಕ್ಷಕ ಜೀವನ್‌ಕುಮಾರ್ ಕೆ.ಹೆಚ್. ಮತ್ತಿತರರು ಉಪಸ್ಥಿತರಿದ್ದರು. ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಚಾಲಕರಿಗೂ ಒಂದು ಸಾವಿರ ರೂ. ಪ್ರೋತ್ಸಾಹಧನ

ಅಪಘಾತವಾದಾಗ ಚಾಲಕರು ಭಯ ಪಡದೆ ಮಾನವೀಯತೆ ದೃಷ್ಟಿಯಿಂದ ಪ್ರಯಾಣಿಕರ ಜೀವ ಉಳಿಸಲು ಮುಂದಾಗಬೇಕು. ಯಾವ ಚಾಲಕ ಪ್ರಥಮ ಚಿಕಿತ್ಸೆಗೆ ಮೊದಲಾಗುತ್ತಾನೋ ಆತನಿಗೆ ಒಂದು ಸಾವಿರ ರೂ. ಪ್ರೋತ್ಸಾಹಧನ ವನ್ನು ನೀಡಲಾಗುತ್ತದೆ. ಅಪಘಾತ ವಿಮಾ ಯೋಜನೆಯಡಿ 5ಲಕ್ಷ ರೂ. ಪರಿಹಾರ ಧನ ಹಾಗೂ ಒಂದು ಲಕ್ಷ ರೂ. ಆಸ್ಪತ್ರೆಯ ಖರ್ಚ ವೆಚ್ಚಗಳನ್ನು ಭರಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯಿಂದ ಚಾಲಕರಿಗೆ ಶಾಶ್ವತವಾದ ಗುರುತಿನ ಚೀಟಿ ನೀಡಿ, ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಉಮೇಶ್ ಪ್ರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News