×
Ad

ಬಿಸಿಯೂಟ ಸಿಬ್ಬಂದಿಗಳ ಮುಷ್ಕರ: ಪುತ್ತೂರಿನಲ್ಲಿ ಪರ್ಯಾಯ ವ್ಯವಸ್ಥೆ

Update: 2018-02-08 20:47 IST

ಪುತ್ತೂರು, ಫೆ. 8: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಸಿಬ್ಬಂದಿಗಳು ರಾಜ್ಯಾದಾದ್ಯಂತ ಮುಷ್ಕರ ನಡೆಸುತ್ತಿದ್ದು, ಪುತ್ತೂರಿನಲ್ಲಿ ಮುಷ್ಕರದಿಮದ ಯಾವುದೇ ತೊಂದರೆಯಾಗದೆ ಎಲ್ಲಾ ಮಕ್ಕಳಿಗೂ ಮದ್ಯಾಹ್ನದ ಬಿಸಿಯೂಟ ಒದಗಿಸಲಾಗಿದೆ. ಕೆಲವು ಶಾಲೆಗಳಲ್ಲಿ ಬಿಸಿಯೂಟ ಸಿಬ್ಬಂದಿಗಳೇ ಅಡುಗೆ ಮಾಡಿದ್ದು, ಉಳಿದಂತೆ ಕೆಲವು ಶಾಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮಕ್ಕಳಿಗೆ ತೊಂದರೆಯಾಗದಂತೆ ಮಾಡಲಾಗಿದೆ.

ಪುತ್ತೂರು ತಾಲೂಕಿನಲ್ಲಿ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳು ಸೇರಿ ಒಟ್ಟು 239 ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆಯ ಬಿಸಿಯೂಟ ವ್ಯವಸ್ಥೆಗಳಿವೆ. ಮುಷ್ಕರದಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಶಾಲೆಯ ಎಸ್‌ಡಿಎಂಸಿ ಮತ್ತು ತಾಯಂದಿರು ತಾವೇ ಶಾಲೆಯಲ್ಲಿ ಅಡುಗೆ ಮಾಡುವ ಮತ್ತು ಮಾಡಿಸುವ ವ್ಯವಸ್ಥೆ ಮಾಡಿದ್ದಾರೆ. ಕೆಲವು ಶಾಲೆಗಳಲ್ಲಿ ಹೊರಗಿನಿಂದ ಅಧಿಕೃತವಾಗಿ ಬಾಣಸಿಗರನ್ನು ಕರೆಸಿ ಅಡುಗೆ ಮಾಡಿಸುತ್ತಿವೆ. ಅವರಿಗೆ ದಿನದ ವೇತನವನ್ನು ಶಾಲೆಯಿಂದಲೇ ಭರಿಸಲಾಗುತ್ತಿದೆ.

ಸಿಬ್ಬಂದಿಗಳು ಮುಷ್ಕರ ನಡೆಸುತ್ತಿದ್ದರೂ ಎಲ್ಲ ಶಾಲೆಗಳಲ್ಲಿಯೂ ಮಕ್ಕಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಕ್ಷರ ದಾಸೋಹಕ್ಕೆ ಎಸ್‌ಓಪಿ (ಸಿಸ್ಟಮ್ಯಾಟಿಕ್ ಆಪರೇಟಿವ್ ಪ್ರೋಸೆಸಿಂಗ್-ಪ್ರಾಮಾಣಿಕ ಕಾರ್ಯಕಾರಿ ವಿಧಾನಗಳು.) ಎಂಬ ಮಾರ್ಗದರ್ಶಿ ಸೂತ್ರವಿದ್ದು, ಇದರಲ್ಲಿನ ನಿಯಮ 9ರ ಪ್ರಕಾರ ಶಾಲೆ ನಡೆಯುವ ಎಲ್ಲ ದಿನಗಳಲ್ಲೂ ಮಕ್ಕಳಿಗೆ ಊಟ ನೀಡಲೇಬೇಕೆಂಬ ನಿಯಮವಿದೆ. ಅದರಲ್ಲೇನಾದರೂ ಸಮಸ್ಯೆ ಇದ್ದರೆ ಶಾಲೆಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಅದೇ ರೀತಿ ಬಿಸಿಯೂಟ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಎಎಂಎಸ್ (ಆಟೋಮೇಟೆಡ್ ಮಾನಿಟರಿಂಗ್ ಸಿಸ್ಟಮ್) ಇದೆ. ಇದರಂತೆ ಪ್ರತೀ ದಿನ ಶಾಲೆಯಲ್ಲಿ ಬಿಸಿಯೂಟ ನೀಡಿದ ಬಗ್ಗೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಖಾತರಿಪಡಿಸಿಕೊಂಡು ಎಸ್ಸೆಮ್ಮೆಸ್ ಮಾಡಬೇಕು. ಇದಕ್ಕೆ ಅವರೇ ಹೊಣೆ. ಅದೇ ರೀತಿ ಕಳೆದ ಮೂರು ದಿನಗಳಿಂದಲೂ ಎಲ್ಲ ಶಾಲೆಗಳಿಂದ ಮೆಸೇಜ್ ಬರುತ್ತಿದೆ ಎಂದವರು ತಿಳಿಸಿದ್ದಾರೆ.

ಸಿಬ್ಬಂದಿ ಮುಷ್ಕರದ ಹೊರತಾಗಿಯೂ ಎಲ್ಲ 239 ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತಿದೆ. ಆಯಾ ಶಾಲೆಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿವೆ ಎಂದು ಪುತ್ತೂರು ತಾಲೂಕಿನ ಅಕ್ಷರದಾಸೋಹ ಉಪ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News