×
Ad

ಮಲ್ಪೆ: ಫೆ.19ರ ಮೀನುಗಾರರ ಸಮ್ಮೇಳನಕ್ಕೆ ಅಮಿತ್ ಶಾ

Update: 2018-02-08 21:58 IST

ಉಡುಪಿ, ಫೆ.8: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಬೃಹತ್ ಸಮ್ಮೇಳನವೊಂದು ಫೆ.19ರಂದು ಸಂಜೆ 4 ಗಂಟೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದ್ದು, ಇದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೂರು ಜಿಲ್ಲೆಗಳ 50,000 ಮೀನುಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಚಿವರು, ಸಂಸದ್ ಸದಸ್ಯರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಪಾಲ್ಗೊಳ್ಳುವರು ಎಂದವರು ವಿವರಿಸಿದರು. ಅಮಿತ್ ಶಾ ಅವರು ಫೆ.19ರಂದು ಅಪರಾಹ್ನ ಮಂಗಳೂರಿನಿಂದ ನೇರವಾಗಿ ಬಂದು ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅವರು ಅಂದು ಉಡುಪಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಫೆ.20ರಂದು ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಪರ್ಯಾಯ ಪಲಿಮಾರು ಶ್ರೀಗಳೊಂದಿಗೆ ಚರ್ಚಿಸಲಿದ್ದಾರೆ ಎಂದವರು ನುಡಿದರು.

ಮಂಗಳವಾರ ಬೆಳಗ್ಗೆ 10ಗಂಟೆಗೆ ಸಾಮಾಜಿಕ ಜಾಲತಾಣ ಪ್ರಮುಖ ರೊಂದಿಗೆ ಸಭೆ ನಡೆಸುವ ಅಮಿತ್ ಶಾ ಬಳಿಕ 11 ರಿಂದ ಆಪರಾಹ್ನ 1 ಗಂಟೆಯ ವರೆಗೆ ಬಿಜೆಪಿಯ ಎರಡು ವಿಭಾಗಗಳ ಆರು ಜಿಲ್ಲೆಗಳ ಶಕ್ತಿ ಕೇಂದ್ರಗಳ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಇದರಲ್ಲಿ ಆರು ಜಿಲ್ಲೆಗಳ 1500 ಮಂದಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬಲಿಕತ ಅವರು ಉತ್ತರ ಕನ್ನಡ ಜಿಲ್ಲೆಗೆ ಹೆಲಿಕಾಫ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಟ್ಟಾರು ತಿಳಿಸಿದರು.

ಮೀನುಗಾರರ ಬೃಹತ್ ಸಮ್ಮೇಳನಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಷನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಸಂಚಾಲಕರಾಗಿ ರುವರು. ಇವರೊಂದಿಗೆ ಐವರು ಸಹಸಂಚಾಲಕರು ಹಾಗೂ ಸಮಿತಿಯ ಸದಸ್ಯರು ಸಮ್ಮೇಳನದ ಯಶಸ್ಸಿಗೆ ದುಡಿಯುವರು ಎಂದರು.

ರಾಜ್ಯದ ಮಠ, ಮಂದಿರಗಳನ್ನು ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಸರಕಾರ ಮತ್ತೆ ನಡೆಸಿದ ಪ್ರಯತ್ನವನ್ನು ಖಂಡಿಸಿದ ಮಟ್ಟಾರು, ರಾಜ್ಯ ಜನರ ಹಾಗೂ ಮಠಾಧಿಪತಿಗಳ ತೀವ್ರ ವಿರೋಧದಿಂದ ಸುತ್ತೋಲೆಯನ್ನು ವಾಪಾಸು ಪಡೆದುಕೊಂಡಿದೆ ಇದು ಸರಕಾರದ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದವರು ಆರೋಪಿಸಿದರು. ಅದೇ ರೀತಿ ಅಲ್ಪಸಂಖ್ಯಾತರ ಮೇಲಿದ್ದ ಕೇಸುಗಳನ್ನು ವಾಪಾಸು ಪಡೆಯುವ ಸುತ್ತೋಲೆ ಹೊರಡಿಸಿ ವಾಪಾಸು ಪಡೆದಿದ್ದನ್ನು ಅವರು ಟೀಕಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಜಿಲ್ಲಾ ಮುಖಂಡರಾದ ಸುರೇಶ್ ನಾಯಕ್ ಕುಯಿಲಾಡಿ, ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ರವಿ ಅಮೀನ್, ಸದಾನಂದ ಬಳ್ಕೂರು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News