×
Ad

ಎಫ್‌ಐಆರ್ ರದ್ದತಿಗೆ ಮೇಜರ್ ಆದಿತ್ಯ ತಂದೆಯಿಂದ ಸುಪ್ರೀಂಗೆ ಮೊರೆ

Update: 2018-02-08 22:24 IST

ಹೊಸದಿಲ್ಲಿ,ಫೆ.8: ಸೇನೆಯ ಗುಂಡು ಹಾರಾಟದಲ್ಲಿ ಮೂವರು ನಾಗರಿಕರ ಸಾವಿಗೆ ಸಂಬಂಧಿಸಿದಂತೆ ತನ್ನ ಪುತ್ರನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ 10 ಗಡ್ವಾಲ್ ರೈಫಲ್ಸ್‌ನ ಮೇಜರ್ ಆದಿತ್ಯ ಕುಮಾರ್ ಅವರ ತಂದೆ ಲೆ.ಕ.ಕರಮ್ ವೀರ ಸಿಂಗ್ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ. ನ್ಯಾಯಾಲಯವು ಶುಕ್ರವಾರ ಅವರ ಅರ್ಜಿಯನ್ನು ಪರಿಶೀಲಿಸಲಿದೆ.

ಘಟನೆಯು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯು ಜಾರಿಯಲ್ಲಿರುವ ಪ್ರದೇಶದಲ್ಲಿ ಮಿಲಿಟರಿ ಕರ್ತವ್ಯದ ಮೇಲೆ ತೆರಳುತ್ತಿದ್ದ ಸೇನಾ ವಾಹನಗಳ ಸಾಲಿಗೆ ಸಂಬಂಧಿಸಿದೆ ಮತ್ತು ಆ ಪ್ರದೇಶದಲ್ಲಿಯ ನಿಯಂತ್ರಣಕ್ಕೆ ಸಿಗದಿದ್ದ ಜನರ ಗುಂಪು ಕಲ್ಲುಗಳ ತೂರಾಟ ನಡೆಸಿ ವಾಹನಗಳಿಗೆ ಹಾನಿಯನ್ನುಂಟು ಮಾಡಿತ್ತು. ಸೇನಾ ಸಿಬ್ಬಂದಿಯನ್ನು ರಕ್ಷಿಸುವುದು ಮತ್ತು ಸೇನೆಯ ಆಸ್ತಿ ರಕ್ಷಣೆ ತನ್ನ ಪುತ್ರನ ಉದ್ದೇಶವಾಗಿತ್ತು. ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಹಿಂಸಾತ್ಮಕ ಗುಂಪಿನಿಂದ ಸಿಬ್ಬಂದಿಗಳು ಸುರಕ್ಷಿತವಾಗಿ ಪಾರಾಗಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮಾತ್ರ ಗುಂಡುಗಳನ್ನು ಹಾರಿಸಲಾಗಿತ್ತು. ಹೀಗಾಗಿ ಮೇ.ಆದಿತ್ಯ ಕುಮಾರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸಬೇಕು ಎಂದು ಸಿಂಗ್ ಕೋರಿದ್ದಾರೆ.

ಜ.27ರಂದು ಶೋಪಿಯಾನ್‌ನ ಗನಾವಪೋರಾ ಗ್ರಾಮದಲ್ಲಿ ಪ್ರತಿಭಟನಾಕಾರರ ಮೇಲೆ ಸೇನೆಯು ಗುಂಡುಗಳನ್ನು ಹಾರಿಸಿದ್ದರಿಂದ ಮೂವರು ಕಾಶ್ಮೀರಿ ಯುವಕರು ಕೊಲ್ಲಲ್ಪಟ್ಟಿದ್ದರು.

 ಜಮ್ಮು-ಕಾಶ್ಮೀರ ಪೊಲೀಸರು ಕೊಲೆ ಆರೋಪದಲ್ಲಿ ಘಟಕದ ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಸೇನೆಯೂ ಪ್ರತಿದೂರನ್ನು ದಾಖಲಿಸಿದೆ. ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಯೋರ್ವರನ್ನು ಗುಂಪು ಕೊಲ್ಲುವುದನ್ನು ತಡೆಯಲು ಆತ್ಮರಕ್ಷಣೆಗಾಗಿ ತಾನು ಗುಂಡು ಹಾರಿಸಿದ್ದೆ ಎಂದು ಸೇನೆಯು ವಾದಿಸಿದೆ. ಗುಂಪಿನ ದಾಳಿಯಿಂದ ಏಳು ಯೋಧರೂ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News