45 ನಿಮಿಷಗಳ ಕಾರ್ಯಾಚರಣೆ ನಡೆಸಿ ಹುಲಿ ಹಿಡಿದು ಇಂಗು ತಿಂದ ಮಂಗನಂತಾದ ಪೊಲೀಸರು!

Update: 2018-02-08 17:15 GMT

ಲಂಡನ್, ಫೆ. 8: ಸ್ಕಾಟ್‌ಲ್ಯಾಂಡ್‌ನ ಆ್ಯಬರ್ಡೀನ್‌ಶಯರ್‌ನ ಪೀಟರ್‌ಹೆಡ್‌ನ ಹೊಲವೊಂದರಲ್ಲಿ ದೊಡ್ಡ ಹುಲಿಯೊಂದು ಮಲಗಿರುವುದನ್ನು ರೈತರೊಬ್ಬರು ನೋಡಿದ್ದು, ಆತಂಕಗೊಂಡ ಅವರು ಕೂಡಲೇ ಪೊಲೀಸರಿಗೆ ಕರೆ ಮಾಡಿದರು.

ಪೊಲೀಸರ ದಂಡೇ ಅಲ್ಲಿಗೆ ನುಗ್ಗಿತು. ತುರ್ತು ಪರಿಸ್ಥಿತಿಗೆ ಇರಲಿ ಅಂತ ಸಶಸ್ತ್ರ ಪಡೆಯನ್ನೂ ಸ್ಥಳಕ್ಕೆ ಕಳುಹಿಸಲಾಯಿತು.

ಹುಲಿಯನ್ನು ದೂರದಲ್ಲಿ ನೋಡಿದ ಪೊಲೀಸರು ಅದನ್ನು ಹಿಡಿಯಲು ಏರ್ಪಾಡುಗಳನ್ನು ಮಾಡಿದರು. ಸಮೀಪದ ವನ್ಯಜೀವಿ ಉದ್ಯಾನಕ್ಕೆ ಕರೆ ಮಾಡಿದ ಪೊಲೀಸರು, ಯಾವುದಾದರು ಹುಲಿ ತಪ್ಪಿಸಿಕಕೊಂಡಿದೆಯೇ ಎಂದು ವಿಚಾರಿಸಿದರು.

ಆದರೆ, 45 ನಿಮಿಷಗಳ ಮುಖಾಮುಖಿಯ ಬಳಿಕ ಅದು ನಿಜವಾದ ಹುಲಿಯಲ್ಲ, ದೊಡ್ಡ ಆಟಿಕೆ ಹುಲಿ ಎನ್ನುವುದು ಬಯಲಾಯಿತು!

ಈ ನಡುವೆ, ಹುಲಿಯ ಮೇಲೆ ನಿಗಾ ಇಟ್ಟಿದ್ದ ಓರ್ವ ಪೊಲೀಸ್ ಅಧಿಕಾರಿಯು, ಹುಲಿಯ ಕಿವಿಗಳು ಚಲಿಸುತ್ತಿವೆ, ಆದರೆ, ಉಳಿದಂತೆ ಅದು ನಿಶ್ಚಲವಾಗಿದೆ ಎಂಬುದಾಗಿಯೂ ಹೇಳಿದ್ದರು.

ತಾವು ಹುಲಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದೇವೆ ಎಂಬುದಾಗಿ ಪೊಲೀಸರು ಆರಂಭದಲ್ಲಿ ಭಾವಿಸಿದ್ದರು. ಆದರೆ ಕೊನೆಗೆ ಬೇಸ್ತು ಬಿದ್ದರು.

‘‘ನೀವು ಯಾವುದರ ಜೊತೆ ವ್ಯವಹರಿಸುತ್ತಿದ್ದೀರಿ ಎನ್ನುವುದರ ಸಂಪೂರ್ಣ ಕಲ್ಪನೆ ನಿಮಗೆ ಸಿಗುವವರೆಗೆ, ನೀವು ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಬೇಕಾಗುತ್ತದೆ’’ ಎಂದು ಪೀಟರ್‌ಹೆಡ್ ಪೊಲೀಸ್ ಇನ್‌ಸ್ಪೆಕ್ಟರ್ ಜಾರ್ಜ್ ಕಾರ್ಡಿನರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News