“ಎಮ್ಮೆ ಕದಿಯಬೇಡಿ ಎಂದದ್ದಕ್ಕೆ ಮಾವನನ್ನು ಕೊಂದು ನೇತಾಡಿಸಿದರು”

Update: 2018-02-08 17:23 GMT

ನಯಪಾರಾ ನಿರಾಶ್ರಿತ ಶಿಬಿರ (ಕಾಕ್ಸ್‌ಬಝಾರ್, ಬಾಂಗ್ಲಾದೇಶ), ಫೆ. 8: ಬಾಂಗ್ಲಾದೇಶದ ಕಾಕ್ಸ್‌ಬಝಾರ್‌ನಲ್ಲಿರುವ ನಯಪಾರಾ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ನಿರಾಶ್ರಿತರು ಸಾಕಷ್ಟು ಭಯಾನಕ ಅನುಭವಗಳ ಸರಮಾಲೆಯನ್ನೇ ಹೊಂದಿದ್ದಾರೆ.

ಈ ಶಿಬಿರಕ್ಕೆ ಇತ್ತೀಚೆಗೆ ಭೇಟಿ ನೀಡಿದ ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆಯೊಂದಿಗೆ ಅಲ್ಲಿನ ನಿವಾಸಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮ್ಯಾನ್ಮಾರ್‌ನಲ್ಲಿದ್ದಾಗ ಅಲ್ಲಿನ ಸರಕಾರ ತನ್ನ ಕುಟುಂಬ ಹಸಿದಿರುವಂತೆ ಮಾಡಿತ್ತು ಎಂದು ಶಿಬಿರದ ನಿವಾಸಿ ಅಬ್ದುಲ್ ಗೋನಿ ಹೇಳುತ್ತಾರೆ.

 ‘‘ನಾನು ಸೌದೆ ಮಾರಿ ಕುಟುಂಬವನ್ನು ಸಾಕುತ್ತಿದ್ದೆ. ಮೂರು ಗಂಟೆ ನಡೆದು ಕಾಡಿಗೆ ಹೋಗಿ ಸೌದೆ ತರುತ್ತಿದ್ದೆ’’ ಎಂದು ಅವರು ಹೇಳಿದರು.

‘‘ಮೊದಲು, ರೊಹಿಂಗ್ಯಾ ಮುಸ್ಲಿಮರು ಕಾಡಿಗೆ ಹೋಗದಂತೆ ಸೈನಿಕರು ತಡೆದರು. ಬಳಿಕ ನೆರೆಯ ಬೌದ್ಧರು ಮತ್ತು 7 ಸೈನಿಕರು ನನ್ನಲ್ಲಿದ್ದ ಒಂದೇ ಒಂದು ದನವನ್ನು ಕಸಿದುಕೊಂಡರು. ಆ ದನವನ್ನು ಭತ್ತದ ಗದ್ದೆಗಳಿಗೆ ಗೊಬ್ಬರಕ್ಕಾಗಿ ಬಾಡಿಗೆಗೆ ನೀಡಿದ್ದೆ.’’

 ‘‘ನಂತರ ಅವರು ತನ್ನ ಎಮ್ಮೆಗಳ ಕಳ್ಳತನವನ್ನು ವಿರೋಧಿಸಿದ ನನ್ನ ಮಾವನನ್ನು ಕೊಂದು ತಂತಿಯಲ್ಲಿ ನೇತಾಡಿಸಿದರು.’’

ಅಕ್ರಮವಾಗಿ ಮೀನುಗಾರಿಕೆ ನಡೆಸಿರುವುದಕ್ಕಾಗಿ ಅವರು ರೊಹಿಂಗ್ಯಾ ಮುಸ್ಲಿಮರನ್ನು ಕೊಂದರು. ಅವರ ಶವಗಳು ಸ್ಥಳೀಯ ನದಿಯಲ್ಲಿ ಹರಿಯುತ್ತಿದ್ದಾಗ, ಇಲ್ಲಿಂದ ಹೊರಡದಿದ್ದರೆ ತನ್ನ ಕುಟುಂಬ ಸದಸ್ಯರೂ ಹೀಗೆ ಸಾಯುತ್ತಾರೆ ಎಂದು ಗೋನಿ ಭಾವಿಸಿದರು.

ಕೆಲವು ದಿನಗಳಲ್ಲಿ ಅವರು ಬಾಳೆ ಗಿಡದ ದಿಂಡನ್ನೇ ಆಹಾರವಾಗಿ ಉಪಯೋಗಿಸಬೇಕಾಗುತ್ತಿತ್ತು. ಅತ್ಯಂತ ಕೆಟ್ಟ ದಿನಗಳಲ್ಲಿ ಮಕ್ಕಳು ಸೇರಿದಂತೆ ಇಡೀ ಕುಟುಂಬ ಉಪವಾಸವೇ ಇರಬೇಕಾಗುತ್ತಿತ್ತು.

‘‘ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿತ್ತು. ನಮ್ಮ ಮೇಲೆ ಒತ್ತಡ ಹೆಚ್ಚುತ್ತಿತ್ತು. ‘ಇದು ನಿಮ್ಮ ನೆಲವಲ್ಲ.. ನಾವು ನಿಮ್ಮನ್ನು ಉಪವಾಸ ಕೆಡವುತ್ತೇವೆ’ ಎಂದು ಅವರು ಹೇಳುತ್ತಿದ್ದರು’’ ಎಂದು 25 ವರ್ಷದ ಗೋನಿ ಹೇಳುತ್ತಾರೆ.

ವ್ಯವಸ್ಥಿತ ದಮನ ಕಾರ್ಯಾಚರಣೆ

 ‘‘ಮ್ಯಾನ್ಮಾರ್‌ನ ರಖೈನ್ ರಾಜ್ಯದ ಪಶ್ಚಿಮ ಭಾಗದಲ್ಲಿ ಸೈನಿಕರು ಮೊದಲು ಹತ್ಯಾಕಾಂಡ ಮತ್ತು ಅತ್ಯಾಚಾರ ನಡೆಸಿದರು. ಬಳಿಕ ರೊಹಿಂಗ್ಯಾರು ಹೆಚ್ಚಾಗಿ ವಾಸಿಸುತ್ತಿದ್ದ ಗ್ರಾಮಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು’’ ಎಂದು ಅಬ್ದುಲ್ ಗೋನಿ ಹೇಳುತ್ತಾರೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ, ಪ್ರತೀಕಾರವಾಗಿ ಸೇನೆ ರೊಹಿಂಗ್ಯಾ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿತು. ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಈವರೆಗೆ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಈಗ ಆಹಾರ ಪೂರೈಕೆಯನ್ನು ರೊಹಿಂಗ್ಯಾ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಗೋನಿ ಆರೋಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News