ದಂಡದೊಂದಿಗೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿ: ಫೋನ್ ಇನ್ ಕಾರ್ಯಕ್ರಮದಲ್ಲಿ ಸಲಹೆ
ಮಂಗಳೂರು, ಫೆ.9: ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಪ್ರಕ್ರಿಯೆಯನ್ನು ಇನ್ನು ಕೂಡ ಕೆಲವರು ಮುಂದುವರಿಸಿದ್ದಾರೆ. ಪೊಲೀಸರು ಅಂತಹ ವಾಹನಗಳನ್ನು ತಡೆದು ದಂಡದ ರೂಪದಲ್ಲಿ ಸವಾರರಿಗೆ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಸಲಹೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಪೊಲೀಸರು ಹೆಲ್ಮೆಟ್ ಮಾರಾಟ ಮಾಡುವಂತಹ ಕಾಯಕದಲ್ಲಿ ತೊಡಗಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ಸವಾರರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ನಂದಿನಿ ಹಾಲಿಗೆ ಕೆಲವು ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಅಧಿಕ ಹಣ ವಸೂಲು ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು.
ಅಧಿಕ ದರ ವಸೂಲಿ ಮಾಡುವ ಅಂಗಡಿಯವರ ವಿರುದ್ಧ ಕರ್ನಾಟಕ ಹಾಲು ಒಕ್ಕೂಟ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಪೊಲೀಸ್ ಆಯುಕ್ತ ಸುರೇಶ್ ಕಿವಿಮಾತಿತ್ತರು.
ಜ್ಯೋತಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಂ ಆಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಫಳ್ನೀರ್ ಕಡೆಯಿಂದ ಬಲ್ಮಠ ನ್ಯೂ ರೋಡ್‌ನಲ್ಲಿ ವಾಹನ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದ ಟಿ.ಆರ್.ಸುರೇಶ್, ಪ್ರಾಯೋಗಿಕವಾಗಿ ಈ ರಸ್ತೆಯಲ್ಲಿ ಫಳ್ನೀರ್ ಕಡೆಯಿಂದ ಜ್ಯೋತಿ ಜಂಕ್ಷನ್‌ಗೆ ವಾಹನ ಸಂಚಾರ ನಿಷೇಧವನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಸಂಚಾರ ಎಸಿಪಿ ಮಂಜುನಾಥ ಶೆಟ್ಟಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್-ಮಂಗಳೂರು ನಡುವಣ ಹೆದ್ದಾರಿ ಹದಗೆಟ್ಟಿದ್ದು ಸಂಚಾರ ಕಷ್ಟಕರವಾಗಿದೆ. ರಸ್ತೆಯ ಅಲ್ಲಲ್ಲಿ ಡಾಮಾರು ಕಳಚಿ ಹೋಗಿದೆ. ಹಲವು ತಿಂಗಳಿನಿಂದ ಈ ಸಮಸ್ಯೆ ಇದ್ದು, ಇದನ್ನು ದುರಸ್ತಿ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮತ್ತೊಮ್ಮೆ ನೆನಪಿಸಲಾಗುವುದು ಎಂದು ಟಿ.ಆರ್.ಸುರೇಶ್ ನುಡಿದರು. ನಗರದ ಆಟೊರಿಕ್ಷಾ ತಂಗುದಾಣಗಳ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ ಅಧಿಕೃತ ರಿಕ್ಷಾ ಪಾರ್ಕ್‌ಗಳನ್ನು ಗುರುತಿಸಿ ನಾಮಲಕವನ್ನು ಅಳವಡಿಸುವಂತೆ ಮಹಾನಗರ ಪಾಲಿಕೆಯನ್ನು ಕೋರಲಾಗಿದೆ ಎಂದು ಟಿ.ಆರ್.ಸುರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
70ನೆ ಫೊನ್ ಇನ್ ಕಾರ್ಯಕ್ರಮದಲ್ಲಿ 27 ಕರೆಗಳನ್ನು ಸ್ವೀಕರಿಸಲಾಯಿತು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್ ಮತ್ತು ಎ.ಎ. ಅಮಾನುಲ್ಲಾ, ಎಎಸ್ಸೈ ಯೂಸುಫ್, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.