×
Ad

ಉಡುಪಿ: ಕಾನೂನು ಸೇವಾ ಪ್ರಾಧಿಕಾರದಿಂದ ಬ್ಯಾಂಕ್‌ನಲ್ಲೇ ಜನತಾ ಅದಾಲತ್

Update: 2018-02-09 20:05 IST

ಉಡುಪಿ, ಫೆ.9: ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಜನತಾ ಅದಾಲತ್, ಮಧ್ಯಸ್ಥಿಕೆ ಮತ್ತು ಸಮಾ ಲೋಚನೆ ಕುರಿತ ಮಾಹಿತಿ ಕಾರ್ಯಕ್ರಮವನ್ನು ಶುಕ್ರವಾರ ಉಡುಪಿ ಸಿಂಡಿ ಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಮಾತ ನಾಡಿ, ಬ್ಯಾಂಕ್ ಗ್ರಾಹಕರ ಹಿತವನ್ನು ಗಮನದಲ್ಲಿರಿಸಿ ಹಾಗೂ ನ್ಯಾಯಾಲಯ ದಲ್ಲಿ ಅರ್ಜಿಗಳು ಸಣ್ಣ ಕಾರಣಗಳಿಂದ ಬಾಕಿ ಉಳಿಯಬಾರದೆಂಬ ಹಿನ್ನಲೆಯಲ್ಲಿ ಜನತಾ ಅದಾಲತನ್ನು ಬ್ಯಾಂಕ್‌ನಲ್ಲೇ ಆಯೋಜಿಸಲಾಗಿದೆ. ವಿವಿಧ ಕಾರಣ ಗಳಿಂದ ಸಾಲ ಪಡೆದುಕೊಂಡ ಗ್ರಾಹಕರು ಅನಿವಾರ್ಯವಾಗಿ ಸಾಲ ಕಟ್ಟದ ಪರಿಸ್ಥಿತಿ ಬಗ್ಗೆ ಅರಿತು ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸಾಲ ಪಡೆದುಕೊಂಡ ಗ್ರಾಹಕರು ಸಾಕಷ್ಟು ಸಮಸ್ಯೆಗಳಿಂದ ಸಾಲ ಮರು ಪಾವತಿಸದೆ ಸಂಕಷ್ಟಕ್ಕೀಡಾಗುತ್ತಾರೆ. ಅವರಿಗೆ ಬಡ್ಡಿಯಲ್ಲಿ ರಿಯಾಯಿತಿ, ತಮ್ಮ ಸ್ಥಿತಿಗತಿಗೆ ಅನುಗುಣವಾಗಿ ರಿಯಾಯಿತಿ ಹಾಗೂ ಅದಾಲತ್‌ನಲ್ಲಿ ತೀರ್ಮಾನ ವಾಗುವ ಗ್ರಾಹಕಪರ ತೀರ್ಪಿನಿಂದ ಪರಿಹಾರ ದೊರಕುಕ್ಕದೆ ಎಂದು ಅವರು ತಿಳಿಸಿದರು.

ಪ್ರತಿ ಎರಡು ತಿಂಗಳಿಗೊಮ್ಮೆ ಎರಡನೆ ಶನಿವಾರದಂದು ಜನತಾ ಆದಾಲತ್ ನಡೆಸಲಾಗುತ್ತದೆ. ಇದರ ಉದ್ದೇಶ ನ್ಯಾಯಾಲಯದಲ್ಲಿ ಬಾಕಿ ಇರುವ ವಿಷಯ ವನ್ನು ಅದಾಲತ್‌ನಲ್ಲಿ ಶಾಂತಿಯುತವಾಗಿ ಪರಿಹರಿಸಿ, ತೀರ್ಪನ್ನು ನೀಡಲಾ ಗುತ್ತದೆ. ಇಲ್ಲಿ ಕೈಗೊಳ್ಳುವ ತೀರ್ಪು ನ್ಯಾಯಾಲಯದಲ್ಲಿ ತೀರ್ಪುಗೊಳ್ಳುವಷ್ಟೇ ಪ್ರಾಮುಖ್ಯವಾಗಿರುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಪ್ರಾಧಿಕಾರದ ಹಿರಿಯ ವಕೀಲರು ಹಾಗೂ ಮಧ್ಯಸ್ಥಿಕೆದಾರ ಕೆ.ಶ್ರೀಶ ಆಚಾರ್ ಮಾತನಾಡಿ, ಜನತಾ ಆದಾಲತ್‌ನ ಮುಖ್ಯ ಉದ್ದೇಶ ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ಹಾಗೂ ನಮಗೆ ಇರುವ ಕಷ್ಟವನ್ನು ನಾವೇ ನಿವಾರಿಸಿ ಕೊಳ್ಳುವುದು. ಅದಾಲತ್ ಎಂಬುದು ಕೇವಲ ಬ್ಯಾಂಕಿಗೆ ಮಾತ್ರ ಸೀಮಿತ ವಿರದೆ, ಕುಟುಂಬದಲ್ಲಿರುವ ವೈವಾಹಿಕ ಜೀವನ, ಅಪಘಾತ ಪರಿಹಾರ, ಜಗಳ, ಆಸ್ತಿ ವಿಚಾರ, ಚೆಕ್‌ಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಶೀಘ್ರ ವಾಗಿ ಪರಿಹರಿಸುವುದು ಕೂಡ ಜನತಾ ಅದಾಲ್ನ ಕಾರ್ಯಸೂಚಿಗಳಲ್ಲಿದೆ ಎಂದರು.

ನ್ಯಾಯಾಲಯಗಳನ್ನು ವಿಷಯ ಮಂಡನೆ ಮಾಡಿ, ಅದರ ಬಗ್ಗೆ ಸಮಾ ಲೋಚನೆ ನಡೆಸಿ ತೀರ್ಪು ನೀಡಿದರೆ ಅದನ್ನು ಮತ್ತೆ ಮೇಲ್ಮನವಿಗೆ ಸಲ್ಲಿಸಿ, ಅಲ್ಲಿ ಪರಿಶೀಲಿಸಬೇಕಾಗುತ್ತದೆ. ಆದರೆ ಅದಾಲತ್‌ನಲ್ಲಿ ತೀರ್ಪು ಸಿಕ್ಕಿದ ಬಳಿಕ ಅದು ಅಲ್ಲಿಯೇ ಇತ್ಯರ್ಥಗೊಳ್ಳತ್ತದೆ. ಇದರಿಂದ ವ್ಯಕ್ತಿಗೆ ಮಾನಸಿಕವಾಗಿ ಗೆಲುವು ಸಿಗುತ್ತದೆ ಹಾಗೂ ಸಾಲ ಕೊಟ್ಟವನಿಗೆ ನೆಮ್ಮದಿ ಸಿಕ್ಕಿದಂತಾಗುತ್ತದೆ ಎಂದರು.

ಸಿಂಡಿಕೇಟ್ ಬ್ಯಾಕಿನ ಪ್ರಾದೇಶಿಕ ಕಚೇರಿಯ ಡೆಪ್ಯುಟಿ ಜನರಲ್ ಮೆನೇಜರ್ ಎಸ್.ಎಸ್.ಹೆಗಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಪ್ರಬಂಧಕ ಡೇಸಿಯಂ ಡಿಸೋಜ ಸ್ವಾಗತಿಸಿದರು. ಸಹಾಯಕ ಪ್ರಬಂಧಕ ರಾಮಚಂದ್ರ ಮುದ್ದೋಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News