ನಿಮ್ಮ ಬೋಧನೆಯನ್ನು ಆಚರಣೆಗೆ ತನ್ನಿ,ಪ್ರತಿದಿನ ಗೋಮೂತ್ರ ಕುಡಿಯಿರಿ

Update: 2018-02-09 15:42 GMT

ಡೆಹ್ರಾಡೂನ್,ಫೆ.9: ಬಿಜೆಪಿಯು ಗೋರಕ್ಷಣೆಯ ಹೆಸರಿನಲ್ಲಿ ಉತ್ತರಾಖಂಡ ಮತ್ತು ಇತರ ಕಡೆಗಳಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಆರೋಪಿಸಿದ್ದಾರೆ.

 ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರತಿದಿನ ಗೋಮೂತ್ರವನ್ನು ಸೇವಿಸುವುದಾಗಿ ಎಲ್ಲ ಬಿಜೆಪಿ ಕಾರ್ಯಕರ್ತರು ಶಪಥ ಕೈಗೊಳ್ಳಬೇಕು. ಒಳ್ಳೆಯ ಕಾರ್ಯ ಮನೆಯಿಂದಲೇ ಆರಂಭವಾಗುತ್ತದೆ ಮತ್ತು ಬಿಜೆಪಿ ನಾಯಕರು ಇತರರಿಗೆ ಬಲವಂತ ದಿಂದ ಬೋಧಿಸುತ್ತಿರುವುದನ್ನು ಸ್ವತಃ ಆಚರಣೆಗೆ ತರಬೇಕು ಎಂದು ಹೇಳಿದರು.

ನೂರು ವರ್ಷಗಳ ಹಿಂದೆ ಕೊಲ್ಲಲ್ಪಟ್ಟಿದ್ದ ಕೆಲವು ಗೋರಕ್ಷಕರ ಸ್ಮರಣಾರ್ಥ ಅವರ ಗ್ರಾಮದಲ್ಲಿ ಆರೆಸ್ಸೆಸ್, ವಿಹಿಂಪ ಮತ್ತು ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗೇಲಿ ಮಾಡಿದ ರಾವತ್, ಇಂತಹ ಕಾರ್ಯಕ್ರಮಗಳಿಂದ ಗೋರಕ್ಷಣೆ ಸಾಧ್ಯವಿಲ್ಲ. ಗೋರಕ್ಷಣೆಯಲ್ಲಿ ಬಿಜೆಪಿಗೆ ಆಸಕ್ತಿಯಿಲ್ಲ. ಅದಕ್ಕೆ ನಮ್ಮ ಸಾಮಾಜಿಕ ಶಾಂತಿಯನ್ನು ಹಾಳುಮಾಡಲು ಹೆಚ್ಚಿನ ಆಸಕ್ತಿಯಿದೆ ಎಂದರು.

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಕಟರಪುರ ಗ್ರಾಮದಲ್ಲಿ ಕೆಲವು ತಿಂಗಳ ಹಿಂದೆ ಗೋರಕ್ಷಕರ ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ. 1918ರಲ್ಲಿ ಗೋಹತ್ಯೆಯನ್ನು ವಿರೋಧಿಸಿದ್ದಕ್ಕಾಗಿ ಈ ಗ್ರಾಮದ ಕೆಲವರನ್ನು ಬ್ರಿಟಿಷ್ ಸರಕಾರವು 1920ರಲ್ಲಿ ಗಲ್ಲಿಗೇರಿಸಿತ್ತು.

ಗೋರಕ್ಷಣೆಯಲ್ಲಿ ಬಿಜೆಪಿಗೆ ನಿಜಕ್ಕೂ ಆಸಕ್ತಿಯಿದ್ದರೆ ಅದು ಉತ್ತರಾಖಂಡದಲ್ಲಿ ಜಾನುವಾರುಗಳಿಗಾಗಿ ರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಬೇಕು. ಅದು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಆದರೆ ಅದು ಈ ಕೆಲಸವನ್ನು ಮಾಡುವುದಿಲ್ಲ ಎಂದು ರಾವತ್ ಹೇಳಿದರು.

 ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಮುನ್ನಾಸಿಂಗ್ ಚೌಹಾಣ್ ಅವರು, ಗೋರಕ್ಷಣೆಯು ನಮ್ಮ ಪಾಲಿಗೆ ಮಹತ್ವದ ವಿಷಯವಾಗಿದೆ. ಸ್ವಾತಂತ್ರಪೂರ್ವ ಕಾಲದಲ್ಲಿಯೂ ಅದು ಸೂಕ್ಷ್ಮ ವಿಷಯವಾಗಿತ್ತು. ಇದನ್ನು ಮರೆಯಲು ಮತ್ತು ದೇಶದ ಸಾಂಸ್ಕೃತಿಕ ವೌಲ್ಯಗಳನ್ನು ಕಡೆಗಣಿಸಲು ಕಾಂಗ್ರೆಸ್ ಬಯಸುವುದಾದರೆ ದೇವರು ಅದಕ್ಕೆ ಒಳ್ಳೆಯದು ಮಾಡಲಿ. ಆದರೆ ಬಿಜೆಪಿ ಭಾರತೀಯ ಸಂಪ್ರದಾಯಗಳ ರಕ್ಷಣೆಗಾಗಿ ಸದಾ ಹೋರಾಟ ನಡೆಸುತ್ತದೆ. ಗೋಮೂತ್ರವು ‘ಸಿದ್ಧ ಔಷಧಿ’ಯಾಗಿದ್ದು ಅದನ್ನು ಶುದ್ಧೀಕರಣಕ್ಕೆ ಬಳಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News