ಭಯೋತ್ಪಾದನೆ ಪ್ರಕರಣ: ಕೆಸಿಪಿ ಸದಸ್ಯರ ವಿರುದ್ಧ ದೋಷಾರೋಪಣೆ ಪಟ್ಟಿ ದಾಖಲು
ಹೊಸದಿಲ್ಲಿ,ಫೆ.9: ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಒಳಸಂಚು ಮತ್ತು ಸ್ಥಳೀಯರಿಂದ ಹಣಸಂಗ್ರಹ ಮಾಡಿದ್ದಕ್ಕಾಗಿ ಮಣಿಪುರದ ನಿಷೇಧಿತ ಭಯೋತ್ಪಾದಕ ಸಂಘಟನೆ ಕಂಗಿಲೀಪಾಕ್ ಕಮ್ಯುನಿಸ್ಟ್ ಪಾರ್ಟಿ(ಕೆಸಿಪಿ)ಯ ಮೂವರು ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.
ವಿಶೇಷ ನ್ಯಾಯಾಧೀಶ ತರುಣ್ ಸಹ್ರಾವತ್ ಅವರ ಮುಂದೆ ಸಲ್ಲಿಸಲಾಗಿರುವ ಅಂತಿಮ ವರದಿಯಲ್ಲಿ ಕೆಸಿಪಿ(ಪೀಪಲ್ಸ್ ವಾರ್ ಗ್ರೂಪ್)ಯ ಮುಖ್ಯ ಕಮಾಂಡರ್ ಲೈಶ್ರಾಮ್ ರಂಜಿತ್ ಸಿಂಗ್ ಮೀತಿ ಅಲಿಯಾಸ್ ತಮ್ನಗಂಬಾ, ಖುಮಂತೆಮ್ ನೋಬಿಚಾ ಸಿಂಗ್ ಮತ್ತು ಥೌಡಮ್ ಸೊತೊಯ್ ಸಿಂಗ್ ಅವರನ್ನು ಆರೋಪಿ ಗಳನ್ನಾಗಿ ಹೆಸರಿಸಲಾಗಿದೆ. ನ್ಯಾಯಾಲಯವು ಫೆ.27ರಂದು ದೋಷಾರೋಪಣ ಪಟ್ಟಿಯನ್ನು ಪರಿಶೀಲಿಸಲಿದೆ.
ಈ ಮೂವರು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಶಾಲೆಗಳು, ಪಂಚಾಯತ್ ಗಳಂತಹ ಸ್ಥಳೀಯ ಸಂಸ್ಥೆಗಳು, ಸರಕಾರಿ ಅಧಿಕಾರಿಗಳು ಮ್ತು ಪೆಟ್ರೋಲ್ ಪಂಪ್‌ಗಳ ಮಾಲಕರಿಗೆ ಬೆದರಿಕೆಗಳನ್ನೊಡ್ಡಿ ಹಣವನ್ನು ಸಂಗ್ರಹಿಸಿದ್ದರೆಂದು ಆರೋಪಿಸಲಾಗಿದೆ.
ದಿಲ್ಲಿ ಪೊಲೀಸರು ಕಳೆದ ವರ್ಷ ಆರೋಪಿಗಳನ್ನು ಬಂಧಿಸಿದ್ದು, ಅಕ್ಟೋಬರ್‌ನಲ್ಲಿ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಅಂತಿಮ ವರದಿಯಲ್ಲಿ ತಲೆಮರೆಸಿಕೊಂಡಿರುವ ಪೈಖೊಂಬಾ ಮೀತಿ ಎಂಬಾತನನ್ನೂ ಸಂಚುಕೋರನೆಂದು ಹೆಸರಿಸಲಾಗಿದೆ.