ಕೇಂದ್ರ ಸರಕಾರದಿಂದ ದ.ಕ. ಜಿಲ್ಲೆಗೆ ವಿವಿಧ ಅನುದಾನ ಬಿಡುಗಡೆ
ಮಂಗಳೂರು, ಫೆ.9: ಕೇಂದ್ರ ಸರಕಾರವು ಲೋಕಸಭಾ ಸದಸ್ಯರ ಶಿಫಾರಸಿನ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇಂದ್ರ ರಸ್ತೆ ನಿಧಿಯಿಂದ ಒಟ್ಟು 22.50 ಕೋಟಿ ರೂ. ಸೇರಿದೆ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕೇಂದ್ರ ರಸ್ತೆ ನಿಧಿಯಡಿ ಜಪ್ಪಿನ ಮೊಗರುವಿನಿಂದ ಎನ್‌ಎಚ್ 75ನ್ನು ಸಂಪರ್ಕಿಸುವ ರಸ್ತೆಗೆ 3 ಕೋಟಿ ರೂ., ಕಂಕನಾಡಿ ಬೈ ಪಾಸ್ ರಸ್ತೆಯಿಂದ ಪಂಪ್‌ವೆಲ್‌ವರೆಗೆ 4 ಕೋಟಿ ರೂ., ಪುತ್ತೂರಿನ ಮುಡಿಪಿನಡ್ಕ, ಮೈಂದನಡ್ಕ, ಸುಳ್ಯ ಪದವು ರಸ್ತೆಗಲಿಗೆ 5.5 ಕೋಟಿರೂ. ಹಾಗೂ ಬಂಟ್ವಾಲ ತಾಲೂಕಿನ ಬದನಾಜೆ, ಕುಂಡಡ್ಕ, ಪರಿಯಲ್ತಡ್ಕದ ಸುಮಾರು 10 ಕಿ.ಮೀ. ರಸ್ತೆಯ ಅಗಲೀಕರಣ ಮತ್ತು ಅಭಿವೃದ್ದಿಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆ ಯಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆಗೆ 20 ಕೋಟಿ ರೂ.ಗಳಲ್ಲಿ ಈಗಾಗಲೇ 5.7 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಕಾರ್‌ಸ್ಟ್ರೀಟ್ ಸರಕಾರಿ ಕಾಲೇಜು, ಬೆಟ್ಟಂಪಾಡಿ, ವಾಮದಪದವು, ಹಳೆಯಂಗಡಿ, ಉಪ್ಪಿನಂಗಡಿ ಸರಕಾರಿ ಕಾಲೇಜುಗಳಿಗೆ ತಲಾ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದವರು ಹೇಳಿದರು.
ಸ್ವದೇಶ್ ದರ್ಶನ್ ಯೋಜನೆಯಡಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ 19.64 ಕೋಟಿ ರೂ. ಹಾಗೂ ನ್ಯಾಷನಲ್ ಸೈಕ್ಲೋನ್ ರಿಸ್ಕ್ ಮಿಟಿಗೇಶನ್ ಯೋಜನೆಯಡಿ ಜಿಲ್ಲೆಯ ಕರಾವಳಿಯ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ 19.06 ಕೋಟಿ ರೂ.ಗಳನ್ನು ಲೋಕಸಭಾ ಸದಸ್ಯರ ಶಿಫಾರಸಿನ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಜಿತೇಂದ್ರ ಕೊಟ್ಟಾರಿ ವಿವರಿಸಿದರು.
ಗೋಷ್ಠಿಯಲ್ಲಿ ವೇದವ್ಯಾಸ ಕಾಮತ್ ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂ ಧಾರ್ಮಿಕ ಕೇಂದ್ರಗಳಿಗೂ ಭೂಮಿ ಮಂಜೂರುಗೊಳಿಸಲು ಆಗ್ರಹ
ಬಾವುಟಗುಡ್ಡೆಯ ಈದ್ಗಾ ಮಸೀದಿಗೆ ಫೆ. 6ರಂದು ರಾಜ್ಯ ಸರಕಾರವು ಗಜೆಟ್ ಅಧಿಸೂಚನೆಯ ಮೂಲಕ 19 ಸೆಂಟ್ಸ್ ಭೂಮಿಯನ್ನು ಮಂಜೂರುಗೊಳಿಸಿದೆ. ಈ ಹಿಂದೆ ಹಿಂದೂ ಧಾರ್ಮಿಕ ಕೇಂದ್ರಗಳಿಗೂ ಭೂಮಿಗೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಈದ್ಗಾ ಮಸೀದಿಗೆ ಕಾನೂನು ಪ್ರಕಾರ ಭೂಮಿ ಮಂಜೂರಾಗಿದ್ದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳಿಗೂ ಅದನ್ನು ಅನ್ವಯಗೊಳಿಸಬೇಕು ಎಂದು ಜಿತೇಂದ್ರ ಕೊಟ್ಟಾರಿ ಆಗ್ರಹಿಸಿದರು.