ದಿಲ್ಲಿ ಮಾಸ್ಟರ್ ಪ್ಲಾನ್‌: ಉದ್ದೇಶಿತ ತಿದ್ದುಪಡಿಗಳ ಕುರಿತು ದಿಲ್ಲಿ ಸರಕಾರ,ಡಿಡಿಎಗೆ ಸುಪ್ರೀಂ ನೋಟಿಸ್

Update: 2018-02-09 16:00 GMT

ಹೊಸದಿಲ್ಲಿ,ಫೆ.9: ದಿಲ್ಲಿ ಮಾಸ್ಟರ್ ಪ್ಲಾನ್,2021ರಲ್ಲಿ ತಿದ್ದುಪಡಿಗಳನ್ನು ಸೂಚಿಸುವ ಮುನ್ನ ಪರಿಸರದ ಮೇಲೆ ಪರಿಣಾಮ ಕುರಿತು ಅಧ್ಯಯನವನ್ನು ನಡೆಸಲಾಗಿತ್ತೇ ಎನ್ನುವುದನ್ನು ತನಗೆ ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ದಿಲ್ಲಿ ಸರಕಾರ ಮತ್ತು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ಗಳಿಗೆ ನೋಟಿಸ್‌ಗಳನ್ನು ಹೊರಡಿಸಿದೆ.

ತಿದ್ದುಪಡಿಗಳನ್ನು ಸೂಚಿಸುವ ಮುನ್ನ ಕಟ್ಟಡಗಳ ಸುರಕ್ಷತೆ, ಸಂಚಾರ ದಟ್ಟಣೆ, ಪಾರ್ಕಿಂಗ್ ಮತ್ತು ನಾಗರಿಕ ಸೌಲಭ್ಯಗಳ ಲಭ್ಯತೆಯಂತಹ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆಯೇ ಎನ್ನುವುದನ್ನು ವಿವರಿಸಿ ಪ್ರಮಾಣಪತ್ರವೊಂದನ್ನು ಒಂದು ವಾರದಲ್ಲಿ ತನಗೆ ಸಲ್ಲಿಸುವಂತೆಯೂ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ದಿಲ್ಲಿ ಸರಕಾರ, ಡಿಡಿಎ ಮತ್ತು ಮುನ್ಸಿಪಲ್ ಸಂಸ್ಥೆಗಳಿಗೆ ನಿರ್ದೇಶ ನೀಡಿದೆ.

2007ರ ನಂತರ ದಿಲ್ಲಿಯಲ್ಲಿ ಮಾಲಿನ್ಯ ಮಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಬಳಿ ಅಂಕಿಅಂಶಗಳ ಲಭ್ಯತೆಯ ಕುರಿತು ತನಗೆ ಮಾಹಿತಿಯನ್ನು ನೀಡುವಂತೆಯೂ ಪೀಠವು ಅಧಿಕಾರಿಗಳಿಗೆ ಆದೇಶಿಸಿದೆ.

ತಾನು ರಚಿಸಿರುವ ಉಸ್ತುವಾರಿ ಸಮಿತಿಯು ಇಲ್ಲಿಯ ಶಹದಾರಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಾಸಕ ಒ.ಪಿ.ಶರ್ಮಾ ಮತ್ತು ಕೌನ್ಸಿಲರ್ ಗುಂಜನ್ ಗುಪ್ತಾ ಅವರು ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಸಮಿತಿ ಸದಸ್ಯರ ಕೆಲಸಕ್ಕೆ ತಡೆಯನ್ನೊಡ್ಡಿದ್ದರು ಎಂಬ ವರದಿಯನ್ನು ಸರ್ವೋಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.

ಸಮಿತಿಯ ಕಾರ್ಯದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನೇಕೆ ಕೈಗೊಳ್ಳಬಾರದು ಎನ್ನುವುದನ್ನು ವಿವರಿಸುವಂತೆ ಸೂಚಿಸಿ ಶರ್ಮಾ ಮತ್ತು ಗುಪ್ತಾ ಅವರಿಗೆ ಶೋಕಾಸ್ ನೋಟಿಸ್‌ಗಳನ್ನು ನ್ಯಾಯಾಲಯವು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News