ರಫೇಲ್ ಖರೀದಿ: ಜೇಟ್ಲಿ ಹೇಳಿಕೆ ಸುಳ್ಳೆಂದು ನಿರೂಪಿಸಿದ ರಾಹುಲ್

Update: 2018-02-09 16:32 GMT

ಹೊಸದಿಲ್ಲಿ, ಫೆ. 9: ಈ ಹಿಂದಿನ ಯುಪಿಎ ಸರಕಾರ ರಕ್ಷಣಾ ಖರೀದಿಯ ಮೊತ್ತ ಬಹಿರಂಗಪಡಿಸಿರಲಿಲ್ಲ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪ್ರತಿಪಾದನೆ ಸುಳ್ಳು ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಈ ಹಿಂದೆ ರಫೇಲ್ ವ್ಯವಹಾರದ ಕುರಿತು ಅವರನ್ನು ‘ಅರುಣ್ ಜೇಟ್ ಲೈ (ಸುಳ್ಳು)’ ಎಂದು ವಾಗ್ದಾಳಿ ನಡೆಸಿರುವುದನ್ನು ನೆನಪಿಸಿಕೊಂಡರು.

 ರಫೇಲ್ ಜೆಟ್ ವ್ಯವಹಾರದ ವಿವರ ಬಹಿರಂಗಪಡಿಸಲು ಸರಕಾರಕ್ಕೆ ಇಚ್ಛೆ ಇಲ್ಲದೇ ಇರುವುದನ್ನು ಮನಗಂಡಿರುವ ರಾಹುಲ್ ಗಾಂಧಿ, ರಫೇಲ್ ಜೆಟ್ ಹೊಂದಲು ಆಗಿರುವ ವೆಚ್ಚವನ್ನು ಬಹಿರಂಗಪಡಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೂಚಿಸುವಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಕೋರಿದರು. ‘ಇಲ್ಲಿ ಏನೋ ಅವ್ಯವಹಾರ ನಡೆಯುತ್ತಿದೆ’ ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಾಹುಲ್ ಗಾಂಧಿ ರಫೇಲ್‌ನ ಸಂಪೂರ್ಣ ವ್ಯವಹಾರವನ್ನು ಸಂಕ್ಷಿಪ್ತವಾಗಿ ಅಭಿವ್ಯಕ್ತಿಸಿದ್ದಾರೆ.

‘‘ಆತ್ಮೀಯ ಜೇಟ್ಲಿ ಅವರೇ, ರಕ್ಷಣಾ ಖರೀದಿಯ ಮೊತ್ತವನ್ನು ಯುಪಿಎ ಸರಕಾರ ಎಂದಿಗೂ ಬಿಡುಗಡೆ ಮಾಡಿರಲಿಲ್ಲ ಎಂದು ನೀವು ಸುಳ್ಳು ಹೇಳಿದಿರಿ. ರಕ್ಷಣಾ ಖರೀದಿಯಲ್ಲಿ ಯುಪಿಎ ಪಾರದರ್ಶಕವಾಗಿತ್ತು ಎಂಬುದನ್ನು ದೃಢಪಡಿಸಲು ಸಂಸತ್ತಿನ ಮೂರು ಪ್ರತಿಕ್ರಿಯೆ ಇಲ್ಲಿದೆ. ನಿಮ್ಮ ಸುಳ್ಳನ್ನು ಇದು ಬಯಲು ಮಾಡಿದೆ. ಈಗ ಪ್ರತಿ ರಫೇಲ್ ಜೆಟ್‌ನ ವೆಚ್ಚ ಎಷ್ಟು ಎಂಬುದನ್ನು ನಿಮ್ಮ ರಕ್ಷಣಾ ಸಚಿವರು ದೇಶಕ್ಕೆ ತಿಳಿಸಲು ಹೇಳಿ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

  ರಾಹುಲ್ ಗಾಂಧಿ ಟ್ವೀಟ್‌ನೊಂದಿಗೆ ಲಗತ್ತಿಸಿರುವ ಈ ಮೂರು ಪ್ರತಿಕ್ರಿಯೆ ಯುಪಿಎ ತನ್ನ ಅಧಿಕಾರಾವಧಿಯಲ್ಲಿ ರಶ್ಯದಿಂದ ಸುಖೋಯ್ ವಿಮಾನ, ಐಎನ್‌ಎಸ್ ವಿಕ್ರಮಾದಿತ್ಯ ಖರೀದಿಸಲು ಹಾಗೂ ಮಿರೇಜ್ ವಿಮಾನವನ್ನು ಮೇಲ್ದರ್ಜೆಗೇರಿಸಲು ಆದ ವೆಚ್ಚವನ್ನು ಸಂಸತ್ತಿಗೆ ತಿಳಿಸಿರುವುದನ್ನು ಬಹಿರಂಗಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News