ಕಾಸರಗೋಡು: ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು
Update: 2018-02-09 22:02 IST
ಕಾಸರಗೋಡು, ಫೆ. 9: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ಮೇಲ್ಪರಂಬದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಕೀಯೂರಿನ ಪಿ.ಬಿ. ಅಶ್ರಫ್ (45) ಎಂದು ಗುರುತಿಸಲಾಗಿದೆ. ಅವರು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಹಾಗೂ ಮುಸ್ಲಿಂ ಲೀಗ್ ಮುಖಂಡರಾಗಿದ್ದರು.
ಗಾಯಗೊಂಡ ಅನ್ವರ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ಪರಂಬ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಡುವೆ ಚಲಿಯಾಂಗೋಡು ಎಂಬಲ್ಲಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಅಶ್ರಫ್ ಹಾಗೂ ಅನ್ವರ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅಶ್ರಫ್ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಸರಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.