×
Ad

ಎಲ್ಲೂರು ಗ್ರಾಪಂ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2018-02-09 22:35 IST

ಪಡುಬಿದ್ರೆ, ಫೆ. 9: ನಿವೇಶನ ರಹಿತರಿಗೆ ಮನೆ ನಿವೇಶನ ನೀಡುವಂತೆ ಆಗ್ರಹಿಸಿ ಶುಕ್ರವಾರ ಎಲ್ಲೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಎಲ್ಲೂರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನ ಸಭೆ ನಡೆಯಿತು.

ಈ ಸಂದರ್ಭ ಮಾತನಾಡಿದ ಶಾಸಕ ವಿನಯಕುಮಾರ್ ಸೊರಕೆ, ನಿವೇಶನ ರಹಿತರಿಗೆ ಮನೆ ನಿವೇಶನವನ್ನು 15 ದಿನಗಳೊಳಗೆ ನೀಡದಿದ್ದಲ್ಲಿ ಅಹೋ ರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಮೀನು ಹಸ್ತಾಂತರವಾಗಿದೆ. ಸಮತಟ್ಟು ಮಾಡಲು ರೂ. 8.5 ಲಕ್ಷ ಅನುದಾನವೂ ಮಂಜೂರಾಗಿದೆ. ಬಡವರ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂ. ಆಡಳಿತವು ಜಮೀನಿನ ಕುರಿತು ನ್ಯಾಯಾಲಯದ ಮೆಟ್ಟಿಲೇರಿದವರಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆ. ಹಿಂದಿನ ಗ್ರಾಮ ಪಂ. ಆಡಳಿತ ಅವಧಿಯಲ್ಲಿ ಮನೆ ನಿವೇಶನಗಳು ಅನುಷ್ಟಾನವಾಗಿತ್ತು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಲಾಗುತ್ತಿದೆ. ಶೀಘ್ರವಾಗಿ ಹಕ್ಕುಪತ್ರ ನೀಡಿ ಮನೆ ಮಂಜೂರಾಗಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂ. ಮುತುವರ್ಜಿ ತೆಗೆದುಕೊಳ್ಳದೆ 226 ಮಂದಿಗೆ ಜಾಗ ಮಂಜೂರಾತಿ ಆದೇಶವಾದರೂ ಮನೆ ನಿವೇಶನ ನೀಡದೆ ವಂಚನೆ ಮಾಡುವ ಕೆಲಸ ಮಾಡಿದೆ ಎಂದು ಆರೋಪಿಸಿದ ಸೊರಕೆ, ಒಂದು ದಿನ ಕೂಡಾ ತಾಲ್ಲೂಕು ಪಂ.ಗೆ ಬಂದು ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುವ ಕೆಲಸ ಗ್ರಾಮ ಪಂ. ಮಾಡಿಲ್ಲ. ವಸತಿ ಮಂಜೂರಾತಿ ಕಾರ್ಯಪಡೆಗೆ ಶಾಸಕರೇ ಅಧ್ಯಕ್ಷರಾದರೂ ನನ್ನ ಗಮನಕ್ಕೆ ತಂದಿಲ್ಲ. ಕೇವಲ ರಾಜಕೀಯ ಮಾಡುವ ಕೆಲಸವನ್ನು ಗ್ರಾಮ ಪಂ. ಮಾಡುತ್ತಿದೆ. ಗ್ರಾಮದ ಆಸುಪಾಸಿನ ಪ್ರಗತಿ ಮಟ್ಟಿಗೆ ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ಟೀಕಿಸಿದರು. 

ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಎಂ.ಎ.ಗಫೂರ್ ಮಾತನಾಡಿ, ಹಿಂದಿನ 10 ವರ್ಷಗಳಲ್ಲಿ ಅದೆಷ್ಟೋ ಅರ್ಜಿಗಳು ನೀಡಿದವರಿಗೆ ಯಾವುದೇ ರೀತಿ ಪರಿಹಾರ ಕೊಡದೆ. ವಸತಿಗೋಸ್ಕರ ಸರಕಾರಿ ಜಾಗದಲ್ಲಿ ಕುಳಿತು ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಅನಿವಾರ್ಯವಾಗಿ ಕಾಂಗ್ರೆಸ್ ಸರಕಾರ ಬಂದ ನಂತರ 94 ಸಿ ಮತ್ತು 94 ಸಿಸಿ ಕಾನೂನು ತರಲಾಯಿತು. ಹಕ್ಕುಪತ್ರ ಕೊಡುವ ಕೆಲಸ ಮಾಡಲಾಯಿತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮನೆ ನಿವೇಶನಕ್ಕೆ ಒತ್ತು ನೀಡಿ ಅಧಿಕಾರಿಗಳಿಗೆ ಒತ್ತಡ ತಂದು ಮನೆ ನಿವೇಶನ ನೀಡುವಲ್ಲಿ ರಾಜ್ಯದಲ್ಲಿ ಕಾಪು ಕ್ಷೇತ್ರ ಪ್ರಥಮ ಸ್ಥಾನದ ಪ್ರೀತಿಗೆ ಪಾತ್ರವಾಗಿದೆ ಎಂದರು.

ಎಲ್ಲೂರು ಗ್ರಾಮ ಪಂ. ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯ ಸಂತೋಷ್ ಶೆಟ್ಟಿ, ತಾಲ್ಲೂಕು ಪಂ. ಸದಸ್ಯರಾದ ಶೇಖಬ್ಬ, ಗೀತಾ ವಾಗ್ಲೆ, ರೇಣುಕಾ ಪುತ್ರನ್, ದಿನೇಶ್ ಕೋಟ್ಯಾನ್, ಗಾಮ ಪಂಚಾಯಿತಿ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ದಮಯಂತಿ ಅಮೀನ್, ಡೇವಿಡ್ ಡಿಸೋಜಾ, ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಎಚ್.ಅಬ್ದುಲ್ಲಾ, ಅಬ್ದುಲ್ ಅಝೀಝ್ ಹೆಜಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News