ಮದುವೆಯಾಗುವುದಾಗಿ ನಂಬಿಸಿ ವಂಚನೆ: ಅಪರಾಧಿಗೆ ಶಿಕ್ಷೆ
ಮಂಗಳೂರು, ಫೆ. 9: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ವಂಚಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಾಜೇಶ್ ಪೂಜಾರಿ(31) ಶಿಕ್ಷೆಗೊಳಗಾದ ಅಪರಾಧಿ. ಆತನಿಗೆ 5 ತಿಂಗಳು ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ದಂಡದ ಮೊತ್ತ 20 ಸಾವಿರದಲ್ಲಿ 15 ಸಾವಿರ ರೂ. ಸಂತ್ರಸ್ತ ಯುವತಿಗೆ ನೀಡಬೇಕು. ಅಲ್ಲದೆ ಮಗುವಿಗೆ 4 ತಿಂಗಳ ಒಳಗಾಗಿ 1.50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಆದೇಶಿಸಿದೆ. ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ತೀರ್ಪು ನೀಡಿದ್ದಾರೆ.
ಮೊಬೈಲ್ ಮೂಲಕ ಪರಿಚಯವಾದ ಯುವತಿಯೊಂದಿಗೆ ರಾಜೇಶ್ ಪೂಜಾರಿ ಸಖ್ಯ ಬೆಳೆಸಿಕೊಂಡಿದ್ದ. ಮಾತನಾಡಲು ಇದೆ ಎಂದು ಹೇಳಿ 2015 ಆಗಸ್ಟ್ 31ರಂದು ಯುವತಿಯನ್ನು ನಗರದ ಸ್ಟೇಟ್‌ಬ್ಯಾಂಕ್‌ಗೆ ಕರೆಸಿಕೊಂಡಿದ್ದ. ಅಲ್ಲಿಂದ ಬೈಕ್‌ನಲ್ಲಿ ಆಕೆಯನ್ನು ಲಾಡ್ಜ್‌ವೊಂದಕ್ಕೆ ಕರೆದೊಯ್ದು, ಮದುವೆ ಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಕೆಲವು ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದು, ಆಕೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಾಗ ರಾಜೇಶ್ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಕೊಣಾಜೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಅಶೋಕ್ ಪಿ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ಸರಕಾರದ ಪರವಾಗಿ ವಾದಿಸಿದ್ದರು.