×
Ad

​ಬೆಂಗ್ರೆಗೆ ಖಾಯಂ ವಾಹನ ಸಂಚಾರದ ಸೇತುವೆ: ಶಾಸಕ ಲೋಬೊ

Update: 2018-02-10 18:35 IST

ಮಂಗಳೂರು, ಫೆ.10: ನಗರದ ಮೀನುಗಾರಿಕಾ ಬಂದರು, ಹಳೆ ಬಂದರಿನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಖಾಯಂ ವಾಹನ ಸಂಚಾರದ ಸೇತುವೆಯನ್ನು ಬೆಂಗ್ರೆಯಲ್ಲಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದ್ದು, ಇದು ಮಂಗಳೂರನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಬೆಂಗ್ರೆಯಲ್ಲಿ ಇಂದು ಕಸಬಾ ಬೆಂಗ್ರೆ, ತೋಟ ಬೆಂಗ್ರೆ, ಕುದ್ರೋಳಿ ಬೆಂಗ್ರೆ ಹಾಗೂ ಬೊಕ್ಕಪಟ್ಣ ಬೆಂಗ್ರೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಬೆಂಗ್ರೆಯನ್ನು ನಗರದ ಜತೆ ಬೆಸೆಯುವ ನಿಟ್ಟಿನಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಆದರೆ, ಈ ತೂಗು ಸೇತುವೆ ಯಲ್ಲಿ ವಾಹನಗಳ ಸಂಚಾರಕ್ಕೆ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಖಾಯಂ ಸೇತುವೆ ನಿರ್ಮಾಣಕ್ಕೆ ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸಾಧ್ಯತೆಗಳನ್ನು ಪರಿಶೀಲಿಸಲು ಕನ್ಸಲ್ಟಂಟ್‌ಗಳನ್ನು ಸರಕಾರ ನೇಮಕ ಮಾಡಿದ್ದು, ಅವರು ಈ ಸೇತುವೆಗೆ ಸಂಬಂಧಿಸಿ ವಿನ್ಯಾಸವನ್ನು ತಯಾರಿಸಲಿದ್ದಾರೆ. ಹಳೆ ಬಂದರಿನಲ್ಲಿ ವಾಣಿಜ್ಯ ವಹಿವಾಟು ಸುಗಮಗೊಳ್ಳುವಲ್ಲಿ ಇದು ಪ್ರಮುಖವಾಗಿದೆ. ಮೀನುಗಾರಿಕಾ ಬಂದರನ್ನು ಅಲ್ಲಿಯೇ ಉಳಿಸಿಕೊಂಡು ಈ ಕಡೆ ಹಳೆ ಬಂದರನ್ನು ಸ್ಥಳಾಂತರಿಸುವ ಚಿಂತನೆ ಇದೆ. ಈ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.

ಹಳೆ ಬಂದರು ಮತ್ತು ಮೀನುಗಾರಿಕೆಯನ್ನು ಅಭಿವೃದ್ಧಿಗೆ ಲಕ್ಷದ್ವೀಪದ ಜತೆ ವಹಿವಾಟು ಅಗತ್ಯವಾಗಿದ್ದು, ಅದಕ್ಕಾಗಿ ಎರಡು ತಿಂಗಳ ಹಿಂದೆ ರಾಜ್ಯದ ಉನ್ನತ ಮಟ್ಟದ ಸಮಿತಿ ಅಲ್ಲಿಗೆ ಭೇಟಿ ನೀಡಿ ಚರ್ಚಿಸಲಾಗಿದೆ. ಲಕ್ಷದ್ವೀಪ ಸರಕಾರ ಕೂಡಾ ರಾಜ್ಯದ ಜತೆ ವಾಣಿಜ್ಯ ವಹಿವಾಟಿಗೆ ಆಸಕ್ತಿ ತೋರಿಸಿ ಈಗಾಗಲೇ 250 ಕೋಟಿ ರೂ.ಗಳ ಹೂಡಿಕೆಗೆ ಮುಂದಾಗಿದೆ. ಈ ನಡುವೆ ಹಳೆ ಬಂದರಿನಲ್ಲಿ ಹೂಳೆತ್ತುವಿಕೆ ಹಾಗೂ ಇತರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 100 ಕೋಟಿ ರೂ.ಗಳನ್ನು ಮಂಜೂರು ಮಾಡಿಸುವಲ್ಲಿ ಪ್ರಯತ್ನ ಮಾಡಿರುವುದಾಗಿ ಶಾಸಕ ಲೋಬೊ ತಿಳಿಸಿದರು.

ಐದು ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಬೆಂಗ್ರೆ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದ್ದೆ. ಅದರಂತೆ ಇಂದು 1138 ಮಂದಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. 45 ದಿನಗಳಲ್ಲಿ ಹಕ್ಕುಪತ್ರ ಪಡೆದವರಿಗೆ ಆರ್‌ಟಿಸಿ ದೊರೆಯಲಿದೆ.  2003ರಲ್ಲಿ ರಲ್ಲಿ ಬೆಂಗ್ರೆಯಲ್ಲಿ 650 ಮಂದಿಗೆ ಹಕ್ಕುಪತ್ರ ನೀಡಿದ್ದರೂ ಸರ್ವೆನಂಬರ್ ಇಲ್ಲದ ಕಾರಣ ಆರ್‌ಟಿಸಿ ಒದಗಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ಫೆ. 17ರಂದು ನಡೆಸಲಾಗುವ ಕಂದಾಯ ಅದಾಲತ್‌ನಲ್ಲಿ ಹಕ್ಕು ಪತ್ರ ಒದಗಿಸುವ ಪ್ರಕ್ರಿಯೆ ನಡೆಯಲಿದೆ. ಈ ಪ್ರದೇಶದಲ್ಲಿ ಇನ್ನೂ ಹಕ್ಕು ಪತ್ರ ಪಡೆಯಲು ಬಾಕಿ ಇರುವ ಅರ್ಹರಿಗೆ ಒದಗಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಹಾಗಿದ್ದರೂ ಖಾಲಿ ನಿವೇಶನ, ಅರ್ಧ ಕಟ್ಟಿದ ಮನೆಗೆ ಅಥವಾ ಒಂದೇ ನಿವೇಶನಕ್ಕೆ ಐದಾರು ಮಂದಿ ಅರ್ಜಿ ಸಲ್ಲಿಸಿದ್ದಲ್ಲಿ ಹಕ್ಕುಪತ್ರ ಒದಗಿಸಲು ಸಾಧ್ಯವಾಗದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೊಗವೀರ ಮಹಾಸಭಾದ ಮುಖಂಡರಾದ ಮೋಹನ್ ಬೆಂಗ್ರೆ, ಶಾಸಕರು ಚುನಾವಣೆಯ ಸಂದರ್ಭ ದಲ್ಲಿ ಇಲ್ಲಿನ ನಿವಾಸಿಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಪೊರೇಟರ್ ವಿನಯ್‌ರಾಜ್ ಶಾಸಕರದ ಸಾಧನೆಗಳ ಬಗ್ಗೆ ವಿವರ ನೀಡಿದರೆ, ಆಸಿಫ್ ಬೆಂಗ್ರೆ, ಸ್ಥಳೀಯರ ಹಲವಾರು ವರ್ಷಗಳ ಕನಸನ್ನು ಶಾಸಕರು ನಸುಗೊಳಿಸಿದ್ದಾರೆ ಎಂದು ಹೇಳಿದರು. ಶೇಖರ್ ಸುವರ್ಣ, ಚೇತನ್ ಬೆಂಗ್ರೆಯವರು ಶಾಸಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮೀರಾ ಕರ್ಕೇರಾ, ರಗುವೀರ್, ಸಲೀಂ ಬೆಂಗ್ರೆ, ಮೆರಿಲ್ ರೇಗೋ, ಪ್ರವೀಣ್ ಚಂದ್ರ ಆಳ್ವ, ಶಕುಂತಳಾ, ಬಶೀರ್ ಹಾಜಿ, ಯೂಸುಫ್ ಉಚ್ಚಿಲ್, ಲತೀಫ್ ಕಂದುಕ, ಕಮಲಾಕ್ಷ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಟಿ.ಕೆ. ಸುಧೀರ್, ಮೋಹನ್ ಮೆಂಡನ್, ಶೇಖರ್ ಬೆಂಗ್ರೆ ಹಾಗೂ ಇತರರು ಉಪಸ್ಥಿತರಿದ್ದರು.

ಫೆ. 17ರಂದು ವಿಶೇಷ ಕಂದಾಯ ಅದಾಲತ್: ತಹಶೀಲ್ದಾರ್
ಕರ್ನಾಟಕದ ಭೂ ಕಂದಾಯ ಕಾಯ್ದೆಯಡಿ ಬೆಂಗ್ರೆಯಲ್ಲಿ 94ಸಿಸಿಯಡಿ ಸರಕಾರಿ ಜಮೀನಿನಲ್ಲಿ ವಾಸ್ತವ್ಯ ಮಾಡಿರುವವರಿಗೆ 1200 ಚದರ ಅಡಿಯ ಭೂಮಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಹಕ್ಕುಪತ್ರ ವಿತರಣೆಯಾದ 45 ದಿನಗಳಲ್ಲಿ ಆರ್‌ಟಿಸಿ ಪತ್ರ ದೊರೆಯಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸ ಬೇಕಾಗಿಲ್ಲ ಅಥವಾ ಬೇರೆ ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ತಹಶೀಲ್ದಾರ್ ಗುರುಪ್ರಸಾದ್ ಸ್ಥಳೀಯರಿಗೆ ಸಲಹೆ ನೀಡಿದರು.

ಆರ್‌ಟಿಸಿ ಪಡೆದವರು ವಾಸ್ತವ್ಯದ ಬಗ್ಗೆ ದೃಢೀಕರಣ ಪತ್ರವನ್ನು ಮನಪಾದಿಂದ ಖಾತೆ ಮಾಡಿಸಬೇಕಾಗುತ್ತದೆ. ಈ ಬಗ್ಗೆ ತಾಲೂಕು ಕಚೇರಿಯಿಂದ ಪತ್ರ ವನ್ನು ಬರೆಯಲಾಗುತ್ತದೆ. ಪತ್ರದ ಪ್ರತಿಯನ್ನು ಇಲ್ಲಿ ಹಕ್ಕುಪತ್ರ, ಆರ್‌ಟಿಸಿ ಪಡೆದ ಪ್ರತಿಯೊಬ್ಬರಿಗೂ ಒದಗಿಸಲಾಗುವುದು. ಆ ಪ್ರತಿಯೊಂದಿಗೆ, ಮನಪಾ ದಲ್ಲಿ ತಮ್ಮ ವಾಸ್ತವ್ಯಕ್ಕೆ ಸಂಬಂಧಿಸಿ ತೆರಿಗೆಯನ್ನು ಪಾವತಿಸತಕ್ಕದ್ದು ಎಂದು ತಹಶೀಲ್ದಾರ್ ಸೂಚಿಸಿದರು.

ಈ ಹಿಂದೆ 650 ಮಂದಿಗೆ ಹಕ್ಕುಪತ್ರ ನೀಡಲಾಗಿದ್ದರೂ ಸರ್ವೆ ನಂಬರ್ ಇಲ್ಲದ ಕಾರಣ ಅವರಿಗೆ ಆರ್‌ಟಿಸಿ ಆಗಿಲ್ಲ. ಈಗ ಸರ್ವೆ ನಂಬ್ರ ಆಗಿದ್ದು, ಹಕ್ಕುಪತ್ರ ನೀಡಲಾದವರ ಹೆಸರಿಗೆ ಫೆ. 17ರಂದು ನಡೆಯುವ ವಿಶೇಷ ಕಂದಾಯ ಅದಾಲತ್‌ನಲ್ಲಿ ಆರ್‌ಟಿಸಿ ಒದಗಿಸಲಾಗುವುದು. ಈ ಹಿಂದೆ ಹಕ್ಕು ಪತ್ರ ಪಡೆದ ಫಲಾನುಭವಿಗಳು ಮೃತಪಟ್ಟಿದ್ದರೆ ಅದನ್ನು ಅವರ ಮಕ್ಕಳ ಹೆಸರಿಗೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೂ ಕನಸುಗಳಿವೆ, ನನಸಾಗಿಸಲು ಆಶೀರ್ವದಿಸಿ !
ಈ ಹಿಂದೆ ಚುನಾವಣೆಯ ಸಂದರ್ಭ ನೀವು ನನ್ನ ಮುಂದಿರಿಸಿದ್ದ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿ, ಅದರ ಕಾನೂನು ತೊಡಕುಗಳನ್ನು ನಿವಾರಿಸಿ ಇದೀಗ ಈಡೇರಿಸಿದ್ದೇನೆ. ಬಂದರು ಸೇರಿದಂತೆ ಮಂಗಳೂರು ಅಭಿವೃದ್ಧಿಗೆ ನಾನು ಇನ್ನೂ ಕೆಲವು ಕನಸನ್ನು ಹೊಂದಿದ್ದೇನೆ. ನಾನು ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇನೆ. ಕನಸು ನನಸಾಗಿಸಲು ನನಗೆ ಆಶೀರ್ವಾದ ಮಾಡಿ ಎಂದು ಶಾಸಕ ಲೋಬೊ ಬೆಂಗ್ರೆಯ ಜನರಲ್ಲಿ ಮನವಿ ಮಾಡುವ ಮೂಲಕ ಮಂಗಳೂರು ದಕ್ಷಿಣದಿಂದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಮತ್ತೆ ಸ್ಪಧೆಗಿಳಿಯುವುದನ್ನು ಖಾತರಿಪಡಿಸಿದ್ದಾರೆ
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News