ಬಿಲ್ಲಾಡಿ: ಬಾವಿಗೆ ಬಿದ್ದು ಚಿರತೆ ಸಾವು
ಉಡುಪಿ, ಫೆ.10: ಚಿರತೆಯೊಂದು ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಿಲ್ಲಾಡಿ ಗ್ರಾಪಂ ವ್ಯಾಪ್ತಿಯ ಭಂಡಾರ್ತಿ ಎಂಬಲ್ಲಿ ಶನಿವಾರ ನಡೆದಿದೆ.
ಭಂಡಾರ್ತಿಯ ಆವರಣ ಇಲ್ಲದ ಗ್ರಾಪಂನ ಹಾಳು ಬಾವಿಗೆ ನಿನ್ನೆ ರಾತ್ರಿಯ ವೇಳೆ ಚಿರತೆಯೊಂದು ಬಾವಿಗೆ ಬಿತ್ತೆನ್ನಲಾಗಿದೆ. ಸಮೀಪದಲ್ಲಿ ಯಾವುದೇ ಮನೆ ಇಲ್ಲದ ಕಾರಣ ಇಂದು ಬೆಳಗ್ಗೆ ಬಾವಿಯಲ್ಲಿ ಈಜಾಡುತ್ತಿದ್ದ ಚಿರತೆಯನ್ನು ಸ್ಥಳೀಯರೊಬ್ಬರು ನೋಡಿದರು. ಈ ಕುರಿತು ಸ್ಥಳೀಯರು ಬೆಳಗ್ಗೆ 7.45ರ ಸುಮಾರಿಗೆ ಶಂಕರನಾರಾಯಣ ವಲಯ ಅರಣ್ಯ ಕಚೇರಿಗೆ ಮಾಹಿತಿ ನೀಡಿದರು.
ಅದರಂತೆ ಅಧಿಕಾರಿಗಳು ಸ್ಥಳೀಯ ಸಿಬ್ಬಂದಿಯೊಬ್ಬರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು. ಆಗಲೇ ಸ್ಥಳದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದರು. ನಂತರ ಬೋನು ಮತ್ತು ಬಲೆಯೊಂದಿಗೆ ಬೆಳಗ್ಗೆ 8.15ರ ಸುಮಾರಿಗೆ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದರು. 8.30ರ ಸುಮಾರಿಗೆ ಎಲ್ಲರೂ ನೋಡುತ್ತಿದ್ದಂತೆ ಕಳೆದ ರಾತ್ರಿಯಿಂದ ಈಜಾಡಿ ಸುಸ್ತಾಗಿದ್ದ ಚಿರತೆ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿತು ಎಂದು ತಿಳಿದು ಬಂದಿದೆ.
ಒಟ್ಟು 25 ಅಡಿ ಆಳದ ಬಾವಿಯಲ್ಲಿ ಸುಮಾರು 15 ಅಡಿ ನೀರು ಇತ್ತು. ರಿಂಗ್ ಹಾಕಿರುವ ಈ ಬಾವಿಗೆ ಭೂಮಿಯಿಂದ ಮೇಲೆ ನಾಲ್ಕು ಅಡಿ ಆವರಣವನ್ನು ನಿರ್ಮಿಸಲಾಗಿತ್ತು. ಬಳಿಕ ಮುಳುಗು ತಜ್ಞ ಮಂಜುನಾಥ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನೀರಿನಲ್ಲಿ ಮುಳುಗಿದ್ದ ಚಿರತೆಯನ್ನು ಬಾವಿ ಯಿಂದ ಮೇಲಕ್ಕೇತ್ತಲಾಯಿತು.
4-5ವರ್ಷ ಪ್ರಾಯದ ಈ ಗಂಡು ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಸಾಬರಕಟ್ಟೆಯ ಪಶು ವೈದ್ಯಾಧಿಕಾರಿಗಳು ನೆರವೇರಿಸಿದರು. ಬಳಿಕ ಹಾರ್ದಳ್ಳಿ ಮಂಡಳ್ಳಿಯ ಡಿಪೋದಲ್ಲಿ ಚಿರತೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.
ಈ ಸಂದರ್ಭ ಕುಂದಾಪುರ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್, ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಎ.ಎ. ಗೋಪಾಲ್, ಅಧಿಕಾರಿಗಳಾದ ಸಂತೋಷ್, ಹರೀಶ್, ವೀರಣ್ಣ, ರಾಕೇಶ್ ಹಾಜರಿದ್ದರು.