×
Ad

ಭಾರತದಲ್ಲಿ ಮುಸ್ಲಿಮರಿಗೆ ಸಿಗುವ ಸವಲತ್ತು ಭಿಕ್ಷೆಯಲ್ಲ, ಅದು ಅವರ ಹಕ್ಕು: ರಫೀಉದ್ದೀನ್ ಕುದ್ರೋಳಿ

Update: 2018-02-10 19:10 IST

ಮಂಗಳೂರು, ಫೆ. 10: ಮೂಲಭೂತ ಸೌಕರ್ಯ ಹಾಗೂ ಸವಲತ್ತುಗಳಿಂದ ವಂಚಿಸಲ್ಪಟ್ಟಿರುವ ಮುಸ್ಲಿಮರ ಸಬಲೀಕರಣಕ್ಕಾಗಿ ನೀಡಲಾಗುವ ಸವಲತ್ತು ಗಳು ಭಿಕ್ಷೆಯಲ್ಲ, ಬದಲಾಗಿ ಅದು ಅವರ ಹಕ್ಕಾಗಿದೆ ಮತ್ತು ಅದು ಅವರಿಗೆ ಲಭಿಸಲೇಬೇಕು ಎಂದು ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.

ಅವರು 'ರಾಷ್ಟ್ರೀಯತೆ, ಜಾತ್ಯಾತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ)' ಎಂಬ ಕೇಂದ್ರೀಯ ವಿಷಯದಲ್ಲಿ 2017ರ ಡಿಸೆಂಬರ್ 8ರಿಂದ 2018ರ ಫೆ. 16  ರ ತನಕ ಯುನಿವೆಫ್ ಕರ್ನಾಟಕ ಆಯೋಜಿಸಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಎಂಬ ಅಭಿಯಾನದ ಪ್ರಯುಕ್ತ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್‌ನಲ್ಲಿ ನಡೆದ ಸಮಾವೇಶದಲ್ಲಿ 'ಭಾರತದ ಮುಸ್ಲಿಮರ ವರ್ತಮಾನ ಮತ್ತು ಭವಿಷ್ಯ' ಎಂಬ ವಿಷಯದಲ್ಲಿ ಮಾತನಾಡಿದರು.

ಶತಮಾನಗಳಿಂದ ಪಾಲಿಸುತ್ತಾ ಬಂದಿರುವ ಮುಸ್ಲಿಮ್ ವೈಯಕ್ತಿಕ ಕಾನೂನುಗಳ ಮೇಲೆ ಸರಕಾರದ ಹಸ್ತಕ್ಷೇಪ ಖಂಡನೀಯವಾಗಿದೆ ಮತ್ತು ಅದರ ಸಂರಕ್ಷಣೆಗೆ ಸಮುದಾಯ ಯಾವ ತ್ಯಾಗಕ್ಕೂ ಸಿದ್ಧವಿದೆ ಎಂದು ಅವರು ಹೇಳಿದರು.

ತ್ರಿವಳಿ ತಲಾಖ್ ನಿಷೇಧ, ಹಜ್ ಸಬ್ಸಿಡಿ ರದ್ಧತಿ, ಸಮಾನ ಸಿವಿಲ್ ಕೋಡ್ ಹೇರಿಕೆ, ನಿರಪರಾಧಿ ಮುಸ್ಲಿಮರ ಬಂಧನ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು ಈ ವಿಚಾರಗಳು ಭಾರತದ ರಾಜಕೀಯ ಪಕ್ಷಗಳಿಗೆ ಮತಗಳಿಸುವ ಮೊಟ್ಟೆಯಾಗಿರುವುದು ದುರಂತವಾಗಿದೆ. ಸಮುದಾಯವನ್ನು ರಾಜಕೀಯ ದಾಳವನ್ನಾಗಿಸುವವರ ವಿರುದ್ಧ ಯುವಕರು ಜಾಗೃತರಾಗಬೇಕು. ದೇಶದ ಸಾಂಸ್ಕೃತಿಕ, ರಾಜಕೀಯ ಪರಂಪರೆಗೆ ಮುಸ್ಲಿಮರ ಕೊಡುಗೆ ಅಪಾರವಿದೆ. ಈ ವಾಸ್ತವಿಕತೆಯನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕುರ್‌ಆನ್ ಹಾಗೂ ಪ್ರವಾದಿ (ಸ) ಸಂದೇಶ ಅನುಸಾರ ನಮ್ಮ ಬದುಕನ್ನು ರೂಪಿಸಬೇಕು ಮತ್ತು ಪರಲೋಕ ಮೋಕ್ಷ ನಮ್ಮ ಗುರಿಯಾಗಿರಬೇಕು. ಧರ್ಮಾಧಾರಿತ, ಸಚ್ಚರಿತ ಸಮಾಜದ ನಿರ್ಮಾಣ ನಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.

ರಾಜ್ಯ ಸಲಹಾ ಸಮಿತಿ ಸದಸ್ಯ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರತ್ಕಲ್ ಶಾಖೆಯ ಉಸ್ತುವಾರಿ ಹುದೈಫ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಶಾಖಾಧ್ಯಕ್ಷ ನೌಫಲ್ ಹಸನ್ ಕಿರ್‌ಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News