ಹೆಣ್ಣು ಮಕ್ಕಳು ಸ್ವತಂತ್ರ ನಿರ್ಣಯ ಕೈಗೊಳ್ಳುವ ಸ್ಥಾನಕ್ಕೇರಬೇಕಿದೆ: ಉಮಾ ಪ್ರಶಾಂತ್
ಮಂಗಳೂರು, ಫೆ.10: ಹೆಣ್ಣುಮಕ್ಕಳು ಸ್ವತಂತ್ರ ನಿರ್ಣಯ ಕೈಗೊಳ್ಳುವ ಸ್ಥಾನ ತಲುಪಬೇಕು. ಇದನ್ನು ಸಾಧಿಸಲು ಗೌರವಾನ್ವಿತ ಹುದ್ದೆ ಹಾಗೂ ಆರ್ಥಿಕ ಸ್ವಾತಂತ್ರದ ಅಗತ್ಯವಿದೆ. ನೈಜ ಅರ್ಥದ ಶಿಕ್ಷಣವನ್ನು ಪಡೆಯುವ ಮೂಲಕ ಅದನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತೆ (ಡಿಸಿಪಿ) ಉಮಾ ಪ್ರಶಾಂತ್ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದ್ದಾರೆ.
ಅವರು ಇಂದು ಸೋದರಿ ನಿವೇದಿತಾರ 150 ನೆ ಜನ್ಮದಿನಾಚರಣೆ ಅಂಗವಾಗಿ ನಗರದ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿನಿಯರಿ ಗಾಗಿ ಏರ್ಪಡಿಸಿದ ‘ಶಕ್ತಿ-2018’ ಮಹಿಳಾ ಸಬಲೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಿಂದಲೂ ತಾನು ಸ್ವಾಮಿ ವಿವೇಕಾನಂದರ ಮೌಲ್ಯಗಳು ಹಾಗೂ ರಾಮಕೃಷ್ಣ ಮಠದ ಕೆಲಸಗಳಿಂದ ಪ್ರಭಾವಿತಳಾಗಿದ್ದೇನೆ. ಮೈಸೂರಿನಲ್ಲಿ ಓದುತ್ತಿದ್ದ ಸಂದರ್ಭ ಈ ಕುರಿತ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಎಂದವರು ಹೇಳಿದರು. ನಮ್ಮದು ಮಧ್ಯಮ ವರ್ಗದ ಒಂದು ಕೃಷಿ ಕುಟುಂಬ. ಬದುಕಿನ ಗುರಿಯ ಬಗ್ಗೆ ಇದ್ದ ದೃಢ ತೀರ್ಮಾನ, ಸತತ ಪರಿಶ್ರಮ ತನ್ನನ್ನು ಇಲ್ಲಿಯ ತನಕ ಕರೆದುಕೊಂಡು ಬಂದಿದೆ ಎಂದವರು ನೆನಪಿಸಿಕೊಂಡರು.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ನಿಗದಿಯಾಗಿದೆ. ಆದರೆ ಕೇವಲ ಈ ಮೀಸಲಾತಿಯಿಂದ ಹೆಣ್ಣು ಮಕ್ಕಳ ಉದ್ದಾರ ವಾಗಲ್ಲ. ಹೀಗೆ ಅಧಿಕಾರ ಪಡೆದುಕೊಂಡ ಎಷ್ಟೋ ಮಹಿಳೆಯರು ಇಂದಿಗೂ ಸ್ವತಂತ್ರ ನಿರ್ಣಯ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ ಎಂದವರು ತಿಳಿಸಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದರ ಆದೇಶದಂತೆ ಭಾರತಕ್ಕೆ ಆಗಮಿಸಿದ ಸೋದರಿ ನಿವೇದಿತಾ ಭಾರತದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರಯತ್ನ ನಡೆಸಿದರು. ಸ್ವಾತಂತ್ರ ಹೋರಾಟಗಾರಿಗೆ ಪ್ರೇರಣೆ ನೀಡಿದರು ಎಂದರು.
ಲಂಡನ್ ರಾಮಕೃಷ್ಣ ಮಿಷನ್ ವೇದಾಂತ ಸೊಸೈಟಿಯ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದಜಿ ಮುಖ್ಯ ಅತಿಥಿಯಾಗಿದ್ದರು. ಬೆಂಗಳೂರು ಮಾನಸ ಕೇಂದ್ರದ ನಿರ್ದೇಶಕ ಪ್ರೊ. ರಘೋತ್ತಮ್ ರಾವ್ ಸಂನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.