ಮಾ. 4: ಕೆನರಾ ಕೆಥೊಲಿಕ್ ಮಹಿಳಾ ಸಮಾವೇಶ
ಮಂಗಳೂರು, ಫೆ.10: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ವತಿಯಿಂದ ಮಾ. 4ರಂದು ನಗರದ ಬೆಂದೂರ್ ಸಂತ ಆಗ್ನೆಸ್ ಸ್ಪೆಷಲ್ ಸ್ಕೂಲ್ ವಠಾರದಲ್ಲಿ ದ.ಕ.ಮತ್ತು ಉಡುಪಿ ಜಿಲಾ ಕೆಥೊಲಿಕ್ ಮಹಿಳಾ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.
ಮಂಗಳೂರು ಬಿಷಪ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಬೆಥನಿ ಸಂಸ್ಥೆಯ ಸಹ ಮುಖ್ಯಸ್ಥೆ ಲಿಲ್ಲಿಸ್ ಬಿ.ಎಸ್. ಉದ್ಘಾಟಿಸಲಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ, ಜೆ.ಬಿ.ಕ್ರಾಸ್ತಾ, ಯುವ ಐಎಎಸ್ ಅಧಿಕಾರಿ ಕ್ವೀನಿ ಮಿಶಲ್ ಡಿಕೊಸ್ತಾ, ಎಂ.ಪಿ.ನೊರೊನ್ಹಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೊ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಮಹಿಳೆಯರಿಗೆ ಸರಕಾರಿ ಸವಲತ್ತುಗಳು ಮತ್ತು ಮಹಿಳಾ ಹಕ್ಕುಗಳ ಕುರಿತು ‘ಸ್ತ್ರೀಯರಿಗಾಗಿ ಸರಕಾರ’ ಎಂಬ ಪುಸ್ತಕ ಅನಾವರಣಗೊಳ್ಳಲಿದೆ ಎಂದರು.
ಕೃಷಿ, ಉದ್ಯಮ, ಆರೋಗ್ಯ, ಸಮಾಜಸೇವೆ, ಶಿಕ್ಷಣ, ಸಾಹಿತ್ಯ, ಕಲೆ, ಕ್ರೀಡೆ, ಸರಕಾರಿ ಸೇವೆ, ವಿಶೇಷ ಸಾಮರ್ಥ್ಯದ ಸ್ತ್ರೀಯರ ಸಹಿತ ವೃತ್ತಿಪರ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದ 10 ಸಾಧಕಿಯರನ್ನು ‘ಕೆಥೊಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ 2018’ ನೀಡಿ ಗೌರವಿಸಲಾಗುವುದು. ಮತ್ತು ಪರಿಸರ ಸಂರಕ್ಷಣೆ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾ.4ರಂದು ಕದ್ರಿ ಮಲ್ಲಿಕಟ್ಟೆಯಿಂದ ಪರಿಸರ ಜಾಗೃತಿ ಅಭಿಯಾನ ಮತ್ತು ರ್ಯಾಲಿ ನಡೆಯ ಲಿದೆ ಎಂದು ಅನಿಲ್ ಲೋಬೊ ಹೇಳಿದರು.
ಈ ಸಂದರ್ಭ ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಜಾನೆಟ್ ಡಿಸೋಜ ಸಮಾವೇಶದ ಲೋಗೊವನ್ನು ಅನಾವರಣಗೈದರು.
ಸುದ್ದಿಗೋಷ್ಠಿಯಲ್ಲಿ ಆಧ್ಯಾತ್ಮಿಕ ನಿರ್ದೇಶಕಿ ಮ್ಯಾಥ್ಯೂ ವಾಸ್, ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜ, ಮಹಿಳಾ ಮಂಡಳಿಯ ಅಧ್ಯಕ್ಷೆ ಟೆರಿ ಪಾಯ್ಸೆ, ಸಂಚಾಲಕಿ ಶರಲ್ ಡಿಸೋಜ, ರಚನಾ ಮಾಜಿ ಕಾರ್ಯದರ್ಶಿ ಯುಲಾಲಿಯಾ ಡಿಸೋಜ ಉಪಸ್ಥಿತರಿದ್ದರು.