×
Ad

ಹಿಂದೂಗಳು ನಮ್ಮ ಸಹೋದರರು: ವಲಿ ರಹ್ಮಾನಿ

Update: 2018-02-10 21:16 IST

ಭಟ್ಕಳ, ಫೆ. 10: ಬಿಜೆಪಿಯ ಸಂಸದ ವಿಯನ ಕಟಿಯಾರ್ ಹೇಳುತ್ತಾರೆ ಈ ದೇಶ ಹಿಂದೂಗಳದ್ದು ಎಂದು. ಆದರೆ ನಾನೂ ಹೇಳುತ್ತೇನೆ ಹಿಂದೂಗಳು ನನ್ನ ಸಹೋದರರು. ವಿನಯ ಕಟಿಯಾರ್ ಹಿಂದೂವಲ್ಲ. ಹಿಂದೂಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಾರೆ ಹೊರತು ಅವರು ಹೃದಯಗಳನ್ನು ಒಡೆಯುವವರಲ್ಲ ಎಂದು ಸಮಾಜಿಕ ಕಾರ್ಯಕರ್ತ ನ್ಯಾಯಾ ಶಿಕ್ಷಣದ ವಿದ್ಯಾರ್ಥಿ ಪಶ್ಚಿಮ ಬಂಗಾಳದ ವಲಿ ರಹ್ಮಾನಿ ಹೇಳಿದರು.

ಅವರು ಶುಕ್ರವಾರ ರಾತ್ರಿ ನವಾಯತ್ ಕಾಲೋನಿಯ ತಂಝೀಮ್ ಮೈದಾನದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಆಯೋಜಿಸಿದ್ದ ಕಾನೂನು ಜಾಗೃತಿ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎದುರಿಸುತ್ತಿರುವ ಆಪಾಯಗಳು, ಅಲ್ಪಸಂಖ್ಯಾತ ಸಮುದಾಯದ ಪಾತ್ರಎಂಬ ವಿಷಯದ ಕುರಿತು ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಪೂರ್ವಜರು ಈ ದೇಶದ ಹಿಂದೂ, ಮುಸ್ಲಿಮ್, ಸಿಖ್ ಮತ್ತಿತರರು ಸೇರಿ ಒಂದು ಸಂವಿಧಾನ ರಚಿಸಿದ್ದು ನಾವೆಲ್ಲರೂ ಇದೇ ಮಣ್ಣಿನ ಭಾಗವಾಗಿದ್ದೇವೆ. ಇಲ್ಲೆ ಹುಟ್ಟಿದ್ದೇವೆ ಇಲ್ಲೇ ಸಾಯಲಿಕ್ಕಿದೆ. ಒಂದು ದೇಶ ಒಂದು ಸೇನೆ ಅದು ಭಾರತದ ಸೇನೆ. ಆದರೆ ಇತ್ತಿಚೆಗೆ ಕೆಲವು ಸಮಾಜಘಾತುಕ ಸೇನೆಗಳು ಹುಟ್ಟಿಕೊಂಡಿದ್ದು ದೇಶದ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿವೆ ಎಂದ ಅವರು ಈ ದೇಶದಲ್ಲಿ ಕರ್ಣಿಸೇನಾ, ಆರ್.ಎಸ್.ಎಸ್.ಸೇನಾ, ಇಂಡಿಯನ್ ಮುಜಾಹಿದ್ದೀನ್ ಸೇನೆಗಳ ಅವಶ್ಯಕತೆಯಿಲ್ಲ ನಮಗೊಂದೇ ಅದು ಭಾರತೀಯ ಸೇನಾ ಇದರ ಅವಶ್ಯಕತೆ ನಮಗಿದೆ ಎಂದರು.

2015ರಲ್ಲಿ ನನ್ನ ವಯಸ್ಸು 15 ಇತ್ತು. ಆಗ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾನು ಹೇಳಿದೆ ನನ್ನ ದೇಶ ನನ್ನ ಸಂವಿಧಾನ ಅಪಾಯದಲ್ಲಿ ಎಂದು. ಆಗ ನನಗೆ ನೀನಿನ್ನು ಬಚ್ಚಾ ನಿನಗಿದು ಅರ್ಥವಾಗದು ಎಂದರು. ನಂತರ ಈಗ ಈ ಭಾಗದ ಸಂಸದರೊಬ್ಬರು ದೇಶದ ಸಂವಿಧಾನ ಬದಲಿಸುತ್ತೇನೆ ಎನ್ನುತ್ತಾರೆ, ಸುಪ್ರಿಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯವಾದಿಗಳು ದೇಶದ ನ್ಯಾಯಾ ವ್ಯವಸ್ಥೆ ಅಪಾಯದಲ್ಲಿದೆ ಎಂದಾಗಲೂ ನನ್ನ ದೇಶ, ನನ್ನ ಸಂವಿಧಾನ ಅಪಾಯದಲ್ಲಿದೆ ಎಂದು ನಿಮಗನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಪ್ರಜಾಭುತ್ವ ಅಪಾಯದಲ್ಲಿದೆ. ದೇಶದ ಸಂವಿಧಾನ ಅಪಾಯದಲ್ಲಿದೆ ಇನ್ನು ನಾವು ಎಚ್ಚರಗೊಳ್ಳದಿದ್ದರೆ ಈ ದೇಶ ಗೂಂಡಾಗಳ, ರೌಡಿಗಳ ಪಾಲಾಗುತ್ತದೆ ಆದ್ದರಿಂದ ದೇಶಬಾಂಧವರೆ ನಿದ್ದೆಯಿಂದ ಎಚ್ಚರಗೊಳ್ಳಿ ಎಚ್ಚರಗೊಳ್ಳುವುದರಲ್ಲೇ ದೇಶದ ಹಿತ ಅಡಗಿದೆ ಎಂದು ಕರೆ ನೀಡಿದರು.

ಬೆಂಗಳೂರು ಹೈಕೋರ್ಟ್ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಬಿ.ಟಿ.ವೆಂಕಟೇಶ್ ನಾಯಕ ಮಾತನಾಡಿ, ಇಂದು ದೇಶದ ಸ್ಥಿತಿ ಗಂಭೀರವಾಗಿದೆ, ಭಯ, ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ ನಾವು ಎತ್ತಸಾಗುತ್ತಿದ್ದೇವೆ ಎನ್ನುವುದೇ ತಿಳಿಯದಾಗಿದೆ. ಪ್ರಶ್ನಿಸುವವರ ದ್ವನಿಯಡಗಿಸುವ ಪ್ರಯತ್ನ ನಡೆದಿದೆ. ಬೆದರಿಕೆ, ಅಪಾಯಗಳನ್ನು ಎದುರಿಸಿದ ಗೌರಿ, ಪ್ರಶ್ನಿಸುವುದರನ್ನು ಬಿಡಲಿಲ್ಲ. ಆದ್ದರಿಂದ ಆಕೆಯ ದ್ವನಿ ಅಡಗಿಸಿ ಬಿಟ್ಟರು. ನಾವು ಪ್ರಶ್ನಿಸುವುದನ್ನು ಬಿಡಬಾರದು ನಾವು ಸುಮ್ಮನಿದ್ದೇವೆ ಅದಕ್ಕಾಗಿಯೇ ನಮ್ಮನ್ನು ಭಯ ಆವರಿಸಿದೆ ಎಂದ ಅವರು, ಈಗ ದೇಶದಲ್ಲಿ ಯುವಕರು ಪ್ರಶ್ನೆ ಮಾಡುವುದನ್ನು ಕಲಿತುಕೊಂಡಿದ್ದಾರೆ, ಕನ್ನಯ್ಯ, ಮೇವಾನಿ, ರಹ್ಮಾನಿಯಂತಹ ಯುವಕರು ಈಗ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣೆಗೆ ಎಂದರು. ನಮ್ಮ ಹಕ್ಕುಗಳಿಗಾಗಿ ನಾವು ಪ್ರಶ್ನಿಸಬೇಕು ಈ ಕೆಲಸ ಯುವ ಸಮುದಾಯದಿಂದಲೇ ಆಗಬೇಕು ಎಂದರು.

ಈ ಸಂದರ್ಭದಲ್ಲಿ ತಾನು ಮಾಡದ ತಪ್ಪಿಗೆ ಕಳೆದ 8ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರ ನಿರಾಪರಾಧಿ ಎಂದು ಸಾಬಿತಾಗಿ ಬಿಡುಗಡೆಗೊಂಡ ಮೌಲಾನ ಶಬ್ಬಿರ್ ಗಂಗೋಳ್ಳಿ ಅಲ್ಲಿ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ನಾಗರಿಕ ಹಕ್ಕು ಸಂರಕ್ಷಣ ಸಂಸ್ಥೆಯ ಜಿಲ್ಲಾಧ್ಯಕ್ಷ ಮೌಲಾನ ಎಸ್.ಎಂ.ಸೈಯದ್ ಝುಬೈರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಮಷಾಯಿಖ್ ವರದಿ ವಾಚಿಸಿ ಎಲ್ಲರನ್ನೂ ಸ್ವಾಗತಿಸಿದರು. ಇಸ್ಮಾಯಿಲ್ ಝವರೇರ್ ಕಾರ್ಯ್ರಮ ನಿರೂಪಿಸಿ, ವಂದಿಸಿದರು.

ವೇದಿಕೆಯಲ್ಲಿ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಉಪ ಖಾಝಿ ಮೌಲಾನ ಅಬ್ದುಲ್ ಅಝೀಮ್ ಕಾಜಿಯಾ, ಮೌಲಾನ ಜಾಫರ್ ನದ್ವಿ ಫಕ್ಕಿಭಾವ್ ನದ್ವಿ, ನಾರ್ತ್ ಕೆನಾರ ಮುಸ್ಲಿಮ್ ಯುನೈಟೆಡ್ ಫೋರಂ ಪ್ರಧಾನ ಕಾರ್ಯದರ್ಶಿ ಮೊಹಸಿನ್ ಖಾಝಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖಾಧ್ಯಕ್ಷ ಮುಜಾಹಿದ್ ಮುಸ್ತಫಾ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಸೈಯ್ಯದ್ ಶಕೀಲ್ ಎಸ್‌ಎಮ್, ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ನವಾಯತ್ ಮಹೆಫಿಲ್ ನ ಜಾನ್ ಅಬ್ದುಲ್ ರಹ್ಮಾನ್ ಮೊಹತಿಶಮ್, ಡಾ. ಮುಹಮ್ಮದ್ ಹನಿಫ್ ಶಬಾಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News