×
Ad

ತಾರಸಿ ತೋಟ ಬೆಳೆಸಿ ತಾಜಾ ತರಕಾರಿ ಪಡೆಯಿರಿ: ದಿನಕರ ಬಾಬು

Update: 2018-02-10 21:29 IST

ಉಡುಪಿ, ಫೆ.10: ಸಾರ್ವಜನಿಕರು ತಮ್ಮ ಮನೆಯ ಮೇಲ್ಚಾವಣಿಗಳಲ್ಲಿ ತಾರಸಿ ತೋಟ ನಿರ್ಮಾಣ ಮಾಡುವ ಮೂಲಕ ದಿನಬಳಕೆಗೆ ತಾಜಾ ತರಕಾರಿ ಗಳನ್ನು ಬೆಳೆಯಬಹುದು ಎಂದು ಉಡುಪಿ ಜಿಲ್ಲಾ ಪಂಚಾಯತ್ ಅ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಶನಿವಾರ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಉಡುಪಿ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಉಡುಪಿ ಜಿಲ್ಲಾಮಟ್ಟದ ಪಲಪುಷ್ಪ ಪ್ರದರ್ಶನ ಹಾಗೂ ರೈತ ದಿನಾಚರಣೆ- 2018ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತಾರಸಿ ತೋಟ ನಿರ್ಮಾಣ ಮಾಡುವುದರ ಮೂಲಕ ದಿನಬಳಕೆಯ ತರಕಾರಿ ಪಡೆಯುವುದರ ಜೊತೆಗೆ ಮಕ್ಕಳಿಗೆ ಕೈತೋಟದ ಕಲ್ಪನೆಯನ್ನು ಸಹ ಮೂಡಿಸಬಹುದಾಗಿದೆ ಎಂದು ಹೇಳಿದ ದಿನಕರಬಾಬು, ತ್ಯಾಜ್ಯ ನಿಲ್ಲುವ ಕಡೆಗಳಲ್ಲಿ ಕೆನ್ನಾ ಗಿಡಗಳನ್ನು ಬೆಳೆಸುವ ಮೂಲಕ ತ್ಯಾಜ್ಯ ಕಡಿಮೆ ಮಾಡಲು ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿದೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಾದ ಪ್ರಕಾಶ ನಾಯ್ಕ, ಶ್ರೀಪತಿ ಭಟ್, ಶ್ರೀನಿವಾಸ ಭಟ್, ಶ್ರೀಪಾದ ಕಟ್ಟೆ, ಗಣಪಯ್ಯ ವಾಲ್ತಾಜೆ ಅವರನ್ನು ಕೃಷಿಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಕೃಷಿ ಇಲಾಖೆ ವತಿಯಿಂದ ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿಯನ್ನು ಭರತ್ ಕುಮಾರ್,ಗೌತಮ್ ಹೆಗ್ಡೆ, ಕರುಣಾಕರ್ ಶೆಟ್ಟಿ ಇವರಿಗೆ ವಿತರಿಸಲಾಯಿತು. ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ವಿಜಯಕುಮಾರ್, ಗಣೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಆಡು ಸಾಕಣೆಯಲ್ಲಿ ಸಾಧನೆ ಮಾಡಿದ ಫ್ರಾನ್ಸಿಲ್ ಮಸ್ಕರೇನಸ್ ಮತ್ತು ಸಮಗ್ರ ಕೃಷಿ ಸಾಧಕ ಗುರುರಾಜ ಭಟ್‌ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ , ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಸಾವಯವ ಒಕ್ಕೂಟದ ದೇವದಾಸ್ ಹೆಬ್ಬಾರ್, ಪ್ರದೀಪ್ ಹೆಬ್ಬಾರ್, ತಾಲೂಕು ಕೃಷಿಕ ಸಮಾಜದ ಸುಭಾಷಿತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಂತೋಣಿ ಮರಿಯಾ ಇಮ್ಯಾನ್ಯುಯಲ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಸರ್ವೋತ್ತಮ ಉಡುಪ, ಬ್ರಹ್ಮಾವರ ಕೆವಿಕೆಯ ಸಹ ಸಂಶೋಧನಾ ನಿರ್ದೇಶಕ ಎಸ್.ಯು ಪಾಟೀಲ್, ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಕಣ್ಮನ ಸೆಳೆಯುವ ಶಿವಲಿಂಗ
ಫೆ.12ರವರೆಗೆ ನಡೆಯುವ ಜಿಲ್ಲಾಮಟ್ಟದ ಪಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿದ 12 ಅಡಿ ಎತ್ತರದ ಶಿವಲಿಂಗ ಮೂರ್ತಿ, ಜರ್ಬೆರಾ ಹೂಗಳಿಂದ ಅಲಂಕರಿಸಿದ 5 ಅಡಿ ಎತ್ತರದ ನಂದಿ ಮೂರ್ತಿ, ಹೂಗಳಿಂದ ಜೋಡಿಸಿದ ಆನೆ, ಹುಲಿ, ಹಾಗೂ ಚಿಟ್ಟೆಗಳ ಆಕೃತಿ, ಪುಷ್ಪಾಲಂಕಾರದ ಕಾಳಿಂಗ ಮರ್ದನ ಕಲಾಕೃತಿ, ವಿವಿಧ ಜಾತಿಯ ಪಾಪಾಸು ಕಳ್ಳಿಗಳ ಅಲಂಕಾರಿಕ ಜೋಡಣೆ, ವಿವಿಧ ಅಲಂಕಾರಿಕಾ ಪುಷ್ಪ ಗಿಡಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News